ಹಂಪಿಯ ಗಜ್ಜಲ ಮಂಟಪ ಆವರಣದಲ್ಲಿ ಶನಿವಾರ ಸಸಿ ನೆಡುವ ಅಭಿಯಾನಕ್ಕೆ ಎಎಸ್‌ಐ ಅಧೀಕ್ಷಕ ಕೆ.ರಾಮಕೃಷ್ಣ ರೆಡ್ಡಿ ಚಾಲನೆ ನೀಡಿದರು. ಅಭಿಯಾನದಲ್ಲಿ ಬಲ್ದೋಟಾ ಸಿಎಸ್‌ಆರ್ ವಿಭಾಗದ ಜಿಎಂ ಡಿ.ಅಶ್ವಿನ್ ಕುಮಾರ್, ಉಪ ವ್ಯವಸ್ಥಾಪಕ ನಾಗರಾಜ್, ತೋಟಗಾರಿಕೆ ತಜ್ಞ ವಿರೂಪಾಕ್ಷಿ ಇತರರಿದ್ದರು.
- ಸಸಿ ನೆಡುವ ಅಭಿಯಾನದಲ್ಲಿ ಎಎಸ್‌ಐ ಹಂಪಿ ವೃತ್ತದ ಅಧೀಕ್ಷಕ ಕೆ.ರಾಮಕೃಷ್ಣ ರೆಡ್ಡಿ ಭರವಸೆ
ಹೊಸಪೇಟೆ: ವಿಶ್ವ ಪರಂಪರೆ ತಾಣವಾದ ಹಂಪಿಯ ಐತಿಹಾಸಿಕ ಸೊಬಗಿನೊಂದಿಗೆ ಹಸಿರು ಪರಿಸರವನ್ನು ವೃದ್ಧಿಸುವ ನಿಟ್ಟಿನಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ ಐ) ಹಂಪಿ ವೃತ್ತ ಹಾಗೂ ಬಲ್ದೋಟಾ ಸಂಸ್ಥೆಯ ಸಹಯೋಗದಲ್ಲಿ ಗಜ್ಜಲ ಮಂಟಪ ಆವರಣದಲ್ಲಿ ಶನಿವಾರ ಸಸಿ ನೆಡುವ ಅಭಿಯಾನ ನೆರವೇರಿತು.
ಎಎಸ್‌ಐ ಹಂಪಿ ವೃತ್ತದ ಅಧೀಕ್ಷಕ ಕೆ.ರಾಮಕೃಷ್ಣ ರೆಡ್ಡಿ ಮಾತನಾಡಿ, ಹಂಪಿಯ ಸ್ಮಾರಕಗಳ ವೈಭವದ ಜತೆಗೆ ಪರಿಸರದ ಸಮತೋಲನ ಕಾಯ್ದುಕೊಳ್ಳುವುದು ನಮ್ಮ ಪ್ರಮುಖ ಧ್ಯೇಯ. ಹಂಪಿಯಲ್ಲಿ ವ್ಯಾಪಕ ಹಸಿರು ಸೌಂದರ್ಯೀಕರಣ ಕೈಗೊಳ್ಳುವ ದೃಢ ಸಂಕಲ್ಪವನ್ನು ನಾವು ಹೊಂದಿದ್ದೇವೆ. ಇಲ್ಲಿ ನೆಡುತ್ತಿರುವ ಹಣ್ಣಿನ ಗಿಡಗಳು ಬೆಳೆದಂತೆ, ಈ ಭಾಗದಲ್ಲಿರುವ ಕೋತಿಗಳು ಹಾಗೂ ವಿವಿಧ ಬಗೆಯ ವನ್ಯಜೀವಿ, ಪಕ್ಷಿ-ಸಂಕುಲಕ್ಕೆ ನೈಸರ್ಗಿಕ ಆಹಾರ ಮತ್ತು ಆಸರೆ ಒದಗಿಸಲು ಅತ್ಯಂತ ಸಹಕಾರಿಯಾಗಲಿವೆ. ಆದ್ದರಿಂದ ಹಂಪಿಯ ವಾತಾವರಣಕ್ಕೆ ಪೂರಕವಾದ ವಿವಿಧ ತಳಿಗಳ ಗಿಡಗಳನ್ನು ನೆಡಲಾಗಿದ್ದು ಸೀಬೆ 50 ಗಿಡಗಳು, ನೇರಳೆ 20 ಗಿಡಗಳು, 15 ಮಾವಿನ ಗಿಡಗಳು, ನೆಲ್ಲಿಕಾಯಿ 15 ಗಿಡಗಳು ನೆಡಲಾಯಿತು ಎಂದು ತಿಳಿಸಿದರು.
ಬಲ್ದೋಟಾ ಸಂಸ್ಥೆಯ ಸಿಎಸ್‌ಆರ್ ವಿಭಾಗದ ಜಿಎಂ ಡಿ.ಅಶ್ವಿನ್ ಕುಮಾರ್ ಮಾತನಾಡಿ, ಐತಿಹಾಸಿಕ ತಾಣಗಳ ನೈಸರ್ಗಿಕ ಸೌಂದರ್ಯ ಮತ್ತು ಜೈವಿಕ ವೈವಿಧ್ಯತೆಯನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಸುರಕ್ಷಿತ ಟ್ರೀ ಗಾರ್ಡ್‌ಗಳ ಸಮೇತ ಉಪಯುಕ್ತ ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಸಸಿಗಳು ಬೆಳೆದು ಹೆಮ್ಮರವಾಗುವವರೆಗೂ ಇವುಗಳ ನಿರ್ವಹಣೆಗೆ ವಿಶೇಷ ಒತ್ತು ನೀಡಲಾಗುವುದು ಎಂದರು.