ಸಂಡೂರು ತಾಪಂ ಸಭಾಂಗಣದಲ್ಲಿ ಕೃಷಿ ಮತ್ತು ಪಶು ಸಖಿಯರ ಪ್ರಗತಿ ಪರಿಶೀಲನಾ ಸಭೆಯನ್ನು ಇಒ ಮಡಗಿನ ಬಸಪ್ಪ ಉದ್ಘಾಟಿಸಿದರು. ಪಶು ಸಂಗೋಪನೆ ಇಲಾಖೆ ಎಡಿ ಡಾ.ವಲಿಬಾಷಾ, ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಬೀರಪ್ಪ ಇದ್ದರು. 
ವಿಜಯನಗರ

ಸಂಡೂರು ತಾಲೂಕಲ್ಲಿ 25 ಡೇರಿ ರಚನೆ

ಪ್ರಮುಖ ಮುಖ್ಯಾಂಶಗಳು

  • ಹಾಲು
  • ಒಕ್ಕೂಟ
  • ಕಾರ್ಯದರ್ಶಿ
ಸಂಡೂರು: ತಾಪಂ ಸಭಾಂಗಣದಲ್ಲಿ ಹಾಲು ಒಕ್ಕೂಟ ಕಾರ್ಯದರ್ಶಿಗಳು, ಕೃಷಿ ಮತ್ತು ಪಶು ಸಖಿಯರ ಪ್ರಗತಿ ಪರಿಶೀಲನಾ ಸಭೆ ಮಂಗಳವಾರ ನಡೆಯಿತು.
ಇಒ ಮಡಗಿನ ಬಸಪ್ಪ ಮಾತನಾಡಿ, ತಾಲೂಕಿನಲ್ಲಿ 25ಹಾಲು ಉತ್ಪಾದನಾ ಸೊಸೈಟಿ (ಡೇರಿ) ರಚಿಸಲಾಗಿದೆ. ಸದರಿ ಒಕ್ಕೂಟಗಳ ಕಟ್ಟಡ ನಿರ್ಮಾಣಕ್ಕೆ ಗ್ರಾಪಂ ಹಂತದಲ್ಲಿ ಸ್ಥಳ ಗುರುತಿಸಿ ನಿರಂತರ ಹಾಲು ಉತ್ಪಾದನೆಗೆ ಕ್ರಮಕೈಗೊಳ್ಳಲಾಗುವುದು. ಪ್ರತಿ ಗ್ರಾಮದಲ್ಲಿ ಹಾಲು ಉತ್ಪಾದನಾ ಸಂಘಗಳನ್ನು ರಚಿಸಿ ಹೈನುಗಾರಿಕೆ ಉತ್ತೇಜಿಸಲು ಪಶು ಸಖಿಯವರು ಶ್ರಮಿಸಬೇಕು. ಎನ್‌ಆರ್‌ಎಲ್‌ಎಂ ಯೋಜನೆಯಡಿ ಹಾಲಿನಿಂದ ಉಪ ಉತ್ಪನ್ನಗಳನ್ನು ಮಾಡಿ ಅಭಿವೃದ್ಧಿ ಹೊಂದಬೇಕು.
ವಿಬಿ-ಜಿ ರಾಮ್-ಜಿ ಯೋಜನೆಯಡಿ ಸಮುದಾಯ ಮತ್ತು ವೈಯಕ್ತಿಕ ಜೀವನೋಪಾಯಕ್ಕೆ ಒತ್ತು ನೀಡಿ ಸಾರ್ವಜನಿಕರು ಮತ್ತು ಮಹಿಳೆಯರು ಸುಸ್ಥಿರ ಜೀವನೋಪಾಯ ಮಾಡಬೇಕೆಂದು ತಿಳಿಸಿದರು.
ಪ್ರಭಾರ ಎಡಿ ವಸಂತಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಎಣ್ಣೆಗಾಣ, ಹಿಟ್ಟಿನ ಗಿರಿಣಿ, ಖಾರ ತಯಾರಿ ತರಬೇತಿ ಕೇಂದ್ರಗಳು, ಅಣಬೆ, ಕೋಳಿ, ದನದ ಶೆಡ್, ಹಂದಿ ಸಾಗಣೆ ಕೈಗೊಂಡು ಪ್ರಗತಿ ಹೊಂದಬೇಕು. ಇದಕ್ಕೆ ಬೇಕಾಗುವ ಕಟ್ಟಡ ನಿರ್ಮಾಣಕ್ಕೆ ವಿಬಿ ಜಿ-ರಾಮ್‌ಜಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಬಹುದೆಂದು ತಿಳಿಸಿದರು.
ಪಶು ಸಂಗೋಪನೆ ಇಲಾಖೆ ಎಡಿ ಡಾ.ವಲಿಬಾಷಾ ಮಾತನಾಡಿ, ಪಶು ವೈದ್ಯಕೀಯ ಸೇವೆಯನ್ನು ಸ್ಥಳೀಯ ಪಶು ಆಸ್ಪತ್ರೆಗಳ ಮೂಲಕ ಪಡೆಯಬಹುದಾಗಿದೆ. ರಾಸುಗಳಿಗೆ ಕೃತಕ ಗರ್ಭಧಾರಣೆ, ಚುಚ್ಚುಮದ್ದು ಇತರ ಸೇವೆಗಳನ್ನು ಒದಗಿಸಲಾಗುವುದು ಎಂದರು.
ರಾಬಕೊವಿ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಬೀರಪ್ಪ ಮಾತನಾಡಿ, ಪ್ರತಿ ಗ್ರಾಮದಲ್ಲಿ ಹಾಲು ಒಕ್ಕೂಟ ಸ್ಥಾಪನೆಯಾದರೆ ಗ್ರಾಮಿಣ ಮಟ್ಟದಲ್ಲಿ ಸುಸ್ಥಿರ ಜೀವನೋಪಾಯ ಕಂಡುಕೊಳ್ಳಬಹುದು. ನಿಯಮಾನುಸಾರ ಕೆಎಂಎಫ್ ಮೂಲಕ ಸೌಲಭ್ಯಗಳನ್ನು ನೀಡಲಾಗುವುದು ಎಂದರು.
ಸೆಲ್ಕೊ ಫೌಂಡೇಷನ್‌ನ ಈರಣ್ಣ ಬಳ್ಳಾರಿ ಮಾತನಾಡಿ, ಸಂಸ್ಥೆಯಿಂದ ವಿವಿಧ ಜೀವನೋಪಾಯ ಚಟುವಟಿಗಳ ಕೈಗೊಳ್ಳಲು ಸೋಲಾರ್ ಆಧಾರಿತ ಘಟಕಗಳನ್ನು ನಿರ್ಮಿಸಿಕೊಡಲಾಗುವುದು. ಶೇ.40ರಿಂದ 45 ಸಹಾಯಧನ ಲಭ್ಯವಿದೆ ಎಂದು ತಿಳಿಸಿದರು. ಪ್ರಸ್ತುತ 120ರಿಂದ 1000 ಕೋಳಿ ಸಾಕಣೆ, ಮೊಟ್ಟೆ ಉತ್ಪಾದನಾ ಘಟಕ ನಿರ್ಮಿಸಿಕೊಳ್ಳುವುದಲ್ಲದೇ ಚಿಪ್ಸ್, ಎಣ್ಣೆ ಗಾಣ, ರೊಟ್ಟಿ, ಹಪ್ಪಳ, ಹಿಟ್ಟಿನ ಗಿರಣಿ ತೆಗೆದುಕೊಳ್ಳಬಹುದೆಂದು ತಿಳಿಸಿದರು.
ಪಶು ವೈದ್ಯಾಧಿಕಾರಿಗಳಾದ ವೀರೇಶ್ ನಾಯ್ಕ, ಡಾ.ರಘುವೀರ್, ತಾಲೂಕು ವ್ಯವಸ್ಥಾಪಕ ರವಿಚಂದ್ರ, ಎನ್‌ಆರ್‌ಎಲ್‌ಎಂನ ಸೋಮಶೇಖರ್ ಇತರರಿದ್ದರು.