ಹೊಸಪೇಟೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಿಯು ಪರೀಕ್ಷಾ ಕೇಂದ್ರಕ್ಕೆ ಹಾಜರಾದ ವಿದ್ಯಾರ್ಥಿಗಳ ಹಾಲ್ ಟಿಕೆಟ್ ಪರಿಶೀಲಿಸಿ, ಒಳಗೆ ಕಳುಹಿಸಲಾಯಿತು. 
ಜಿಲ್ಲೆ

ವಿಜಯನಗರ-ಬಳ್ಳಾರಿ ಅವಳಿ ಜಿಲ್ಲೆಯ 34 ಕೇಂದ್ರಗಳಲ್ಲಿ ಪಿಯುಸಿ ಪರೀಕ್ಷೆ

ಶಶಿಧರ ಎಲ್

ಹೊಸಪೇಟೆ: ನೂತನ ವಿಜಯನಗರ ಜಿಲ್ಲೆಯಲ್ಲಿ 2022-23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಗುರುವಾರದಿಂದ ಆರಂಭಗೊಂಡಿದ್ದು, ಮೊದಲ ದಿನದ ಕನ್ನಡ ಭಾಷಾ ಪರೀಕ್ಷೆಗೆ 12451 ವಿದ್ಯಾರ್ಥಿಗಳು ಹಾಜರಾಗಿದ್ದರು.

ಜಿಲ್ಲೆಯ ಹೊಸಪೇಟೆ ತಾಲೂಕಿನ 5, ಹರಪನಹಳ್ಳಿಯಲ್ಲಿ 5, ಹೂವಿನಹಡಗಲಿ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ತಲಾ ಎರಡು ಒಟ್ಟು 18 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಕನ್ನಡ ವಿಷಯಕ್ಕೆ 13,181 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಆ ಪೈಕಿ 730 ವಿದ್ಯಾರ್ಥಿಗಳು ಗೈರು ಆಗಿದ್ದರು.

ಹರಪಹಳ್ಳಿಯ ಎಚ್‌ಪಿಎಸ್ ಪಿಯು ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದ 39ವಿದ್ಯಾರ್ಥಿಗಳಿಗೆ ಓಎಂಆರ್ ಪತ್ರಿಕೆ ಪೂರೈಕೆಯಾಗಿರಲಿಲ್ಲ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು, ಕೆಲಕಾಲ ಪರೀಕ್ಷಾ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಿದ್ದರಿಂದ ಪಿಯು ಬೋರ್ಡ್ ಉತ್ತರ ಪತ್ರಿಕೆಗಳನ್ನು ಒದಗಿಸಿರಲಿಲ್ಲ ಎನ್ನಲಾಗಿದೆ. ಆದರೆ, ಹಾಜರಾತಿ ಕೊರತೆಯಿದ್ದವರಿಗೂ ಹಾಲ್ ಟಿಕೆಟ್ ನೀಡಿದ್ದು ಸಮಸ್ಯೆಗೆ ಕಾರಣವಾಯಿತು. ಇನ್ನುಳಿದಂತೆ ಜಿಲ್ಲೆಯಲ್ಲಿ ಯಾವುದೇ ಪರೀಕ್ಷಾ ಅಕ್ರಮಗಳ ಬಗ್ಗೆ ವರದಿಯಾಗಿಲ್ಲ.

ಇಷ್ಟ ದೇವರಲ್ಲಿ ಪ್ರಾರ್ಥನೆ: ಕಳೆದ ಒಂದು ವರ್ಷದಿಂದ ನಿರಂತರ ಅಭ್ಯಾಸ ಮಾಡಿರುವ ವಿದ್ಯಾರ್ಥಿಗಳು, ಆತ್ನವಿಶ್ವಾಸದೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶಿಸಿದರು. ಪರೀಕ್ಷಾ ಭಯದಲ್ಲಿರುವ ಅನೇಕರು ಬೆಳಗ್ಗೆಯೇ ತಮ್ಮ ಆರಾಧ್ಯ ದೈವದ ದರ್ಶನಾರ್ಶೀವಾದ ಪಡೆದು, ಪರೀಕ್ಷೆಗೆ ಹಾಜರಾದರು. ಪಾಲಕರು ಮಕ್ಕಳೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಧೈರ್ಯ ತುಂಬಿದರು. ಸಾರಿಗೆ ಸಂಸ್ಥೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದರಿಂದ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಯಿತು.

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ನಿಯಮಾವಳಿಯಂತೆ ಹಾಜರಾತಿ ಕೊರತೆ ಇದ್ದವರಿಗೆ ಪರೀಕ್ಷೆ ಬರೆಯಲು ಅವಕಾಶವೇ ಇಲ್ಲ. ಕೆಲವೊಮ್ಮೆ ಅಂತಹರ ಹೆಸರಲ್ಲೂ ಹಾಲ್ ಟಿಕೆಟ್ ಬಂದಿರುತ್ತವೆ. ಅವುಗಳನ್ನು ಪರಿಶೀಲಿಸಿ ಅರ್ಹರಲ್ಲದವರ ಪ್ರವೇಶ ಪತ್ರಗಳನ್ನು ಪದವಿ ಪೂರ್ವ ಪರೀಕ್ಷಾ ಮಂಡಳಿಗೆ ಹಿಂದಿರುಗಿಸುವುದು ಆಯಾ ಕಾಲೇಜಿನ ಪ್ರಾಚಾರ್ಯರ ಜವಾಬ್ದಾರಿ. ಈ ಕುರಿತು ಇಲಾಖೆಯ ಗಮನಕ್ಕೆ ತರಲಾಗಿದೆ. ಹಾಜರಾತಿ ಇಲ್ಲದವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ.| ಸುಗೇಂದ್ರ, ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ

ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಸುಸೂತ್ರ


ಬಳ್ಳಾರಿ: ಜಿಲ್ಲೆಯ 16 ಕೇಂದ್ರಗಳಲ್ಲಿ ಗುರುವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸುಸೂತ್ರವಾಗಿ ನಡೆಯಿತು. ಮೊದಲ ದಿನದ ಕನ್ನಡ ಭಾಷಾ ಪರೀಕ್ಷೆಗೆ 10,864 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದು, 450 ಮಂದಿ ಗೈರಾಗಿದ್ದರು. ಬಳ್ಳಾರಿ ತಾಲೂಕಿನ 10 ಕೇಂದ್ರಗಳಲ್ಲಿ 6302 ವಿದ್ಯಾರ್ಥಿಗಳು ನೋಂದಣಿಗೊಂಡಿದ್ದರು. 6073 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, 259 ಮಂದಿ ಗೈರಾಗಿದ್ದರು. ಸಂಡೂರು ತಾಲೂಕಿನ 2 ಪರೀಕ್ಷಾ ಕೇಂದ್ರಗಳಲ್ಲಿ 1076 ವಿದ್ಯಾರ್ಥಿಗಳು ನೋಂದಾಯಿಸಿದ್ದು, 1017 ಹಾಜರಾಗಿದ್ದರು. 59 ವಿದ್ಯಾರ್ಥಿಗಳು ಗೈರಾಗಿದ್ದರು. ಸಿರಗುಪ್ಪ ತಾಲೂಕಿನ ಎರಡು ಕೇಂದ್ರದಲ್ಲಿ 2100 ನೋಂದಣಿ, 2012 ಹಾಜರು, 88 ಗೈರಾಗಿದ್ದರು. ಕುರಗೋಡು ಒಂದು ಕೇಂದ್ರದಲ್ಲಿ 540 ನೋಂದಣಿ, 523 ಹಾಜರು, 17 ವಿದ್ಯಾರ್ಥಿಗಳು ಗೈರು. ಕಂಪ್ಲಿ ತಾಲೂಕಿನ ಒಂದು ಕೇಂದ್ರದಲ್ಲಿ 816 ವಿದ್ಯಾರ್ಥಿಗಳು ನೋಂದಣಿ, 789 ಹಾಜರು, 27 ಮಂದಿ ಗೈರಾಗಿದ್ದರು. ಯಾವುದೇ ಕೇಂದ್ರದಲ್ಲಿ ಅಹಿತಕರ ಘಟನೆಗಳು ನಡೆದಿಲ್ಲ. ಡಿಬಾರ್ ಯಾವುದು ಆಗಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸುಗೇಂದ್ರ ಎಚ್. ತಿಳಿಸಿದ್ದಾರೆ.