ಜಿಲ್ಲೆ

ಹೊಸಕೆರೆಯಲ್ಲಿ ರಾತ್ರಿಯಿಡಿ ವಿಜಯದಶಮಿ ಸಂಭ್ರಮ: ದೇವರ ದರ್ಶನಕ್ಕೆ ಮುಂಜಾನೆವರೆಗೂ ಕಾದ ಭಕ್ತರು

ಮಂಡ್ಯ: ಮದ್ದೂರು ತಾಲೂಕಿನ ಹೊಸಕೆರೆ ಗ್ರಾಮದ ಬೀರೇಶ್ವರಸ್ವಾಮಿ ದೇವಸ್ಥಾನದಲ್ಲಿ ರಾತ್ರಿಯಿಡಿ ವಿಜಯದಶಮಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಯಿತು. ಈ ರೀತಿ ಧಾರ್ಮಿಕ ಕೈಂಕರ್ಯ ನಡೆಯುವುದು ಅಪರೂಪ.

ಪ್ರತಿ ವರ್ಷ ಶಿವರಾತ್ರಿ ಹಾಗೂ ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ವಿಶೇಷ ಆಚರಣೆ ನಡೆಯುತ್ತದೆ. ಇದನ್ನು ಕಣ್ತುಂಬಿಕೊಳ್ಳಲು ಮಂಡ್ಯ, ರಾಮನಗರ, ತುಮಕೂರು, ಬೆಂಗಳೂರು, ದಾವಣಗೆರೆ, ಹಾಸನ ಸೇರಿದಂತೆ ಹಲವು ಜಿಲ್ಲೆ ಹಾಗೂ ತಮಿಳುನಾಡಿನಿಂದಲೂ ಭಕ್ತರು ಆಗಮಿಸಿದರು. ಅದರಲ್ಲಿಯೂ ಕೆಲವರು ಎರಡು ದಿನ ಮುಂಚಿತವಾಗಿಯೇ ಬಂದು ವಾಸ್ತವ್ಯ ಹೂಡುತ್ತಾರೆ.

ಹಬ್ಬದ ಅಂಗವಾಗಿ ದೇವಸ್ಥಾನದ ಕಟ್ಟಡಕ್ಕೆ ಮಾಡಲಾಗಿದ್ದ ವಿದ್ಯುತ್ ದೀಪಾಲಂಕಾರ ಆಕರ್ಷಕವಾಗಿತ್ತು. ಅಂತೆಯೇ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಮಾತ್ರವಲ್ಲದೆ ಗ್ರಾಮದ ಹೊರವಲಯದಲ್ಲಿರುವ ದೇವಸ್ಥಾನದಲ್ಲಿ ಜನಜಂಗುಳಿ ಜೋರಾಗಿತ್ತು. ಮಂಗಳವಾರ ರಾತ್ರಿ ವೇಳೆಗೆ ಬೀರೇಶ್ವರ ದೇವರಿಗೆ ವಿವಿಧ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಬಳಿಕ ದೇವರ ಬಳಿ ಹರಕೆ ಹೊತ್ತು ಅದು ಈಡೇರಿದ ಹಿನ್ನೆಲೆಯಲ್ಲಿ ಬಾಯಿಬೀಗ ಹಾಕಿಸಿಕೊಳ್ಳುವ ಮೂಲಕ ಭಕ್ತಿ ಭಾವ ಮೆರೆದರು. ಇದಕ್ಕಾಗಿ ನೂರಾರು ಮಹಿಳೆಯರು, ಪುರುಷರು ವಿವಿಧೆಡೆಯಿಂದ ಆಗಮಿಸಿದ್ದರು. ಅದರಂತೆ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬಾಯಿಬೀಗ ಕಾರ್ಯಕ್ರಮ ಮುಕ್ತಾಯವಾಯಿತು.

ಬಳಿಕ ಬುಧವಾರ ಮುಂಜಾನೆವರೆಗೂ ಪೂಜಾ ಕೈಂಕರ್ಯ ನಡೆಯಿತು. ಇತ್ತ ವಿವಿಧೆಡೆಯಿಂದ ಆಗಮಿಸಿದ ಭಕ್ತರು ದೇವಸ್ಥಾನದ ಆವರಣದಲ್ಲಿಯೇ ವಿಶ್ರಾಂತಿ ಪಡೆದುಕೊಂಡರು. ಇನ್ನು ಮುಂಜಾನೆ 3 ಗಂಟೆ ಸುಮಾರಿಗೆ ದೇವರ ಉತ್ಸವ ನಡೆಯಿತು. ದೇವಸ್ಥಾನದಿಂದ ಹೊರಟು ಬನ್ನಿಮಂಟಪಕ್ಕೆ ಹೋಗಿ ಅಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸುಮಾರು 5.30ರ ಹೊತ್ತಿಗೆ ದೇವರನ್ನು ಮತ್ತೆ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು. ಈ ವೇಳೆ ದೇವಸ್ಥಾನದ ಪ್ರಾಂಗಣದಲ್ಲಿ ಸುಮಾರು ಹೊತ್ತು ತಮಟೆ ಸದ್ದಿಗೆ ಹೆಜ್ಜೆ ಹಾಕಿದರು. ಬಳಿಕ ಮಹಾಮಂಗಳಾರತಿ ನೆರವೇರಿಸಿ ಭಕ್ತರು ದೇವರ ದರ್ಶನ ಮಾಡಲು ಅವಕಾಶ ಕಲ್ಪಿಸಲಾಯಿತು.

ಅಚ್ಚುಕಟ್ಟಾದ ಊಟದ ವ್ಯವಸ್ಥೆ: ಹಬ್ಬಕ್ಕೆಂದು ವಿವಿಧೆಡೆಯಿಂದ ಆಗಮಿಸಿದವರಿಗೆ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಂಗಳವಾರ ರಾತ್ರಿ ಒಮ್ಮೆ ಮತ್ತು ಹಸಿವಿನೊಂದಿಗೆ ಬಾಯಿಬೀಗ ಚುಚ್ಚಿಸಿಕೊಂಡವರಿಗೆ ಊಟದ ವ್ಯವಸ್ಥೆ ಇತ್ತು. ಅಂತೆಯೇ ಟೀ ಕೂಡ ನೀಡಲಾಯಿತು. ಇದರಿಂದಾಗಿ ದೂರದ ಊರಿನಿಂದ ಆಗಮಿಸಿದವರಿಗೆ ಅನುಕೂಲವಾಯಿತು. ಇದಲ್ಲದೆ ದೇವಸ್ಥಾನದಲ್ಲಿಯೂ ಪ್ರಸಾದ ವಿನಿಯೋಗ ನಡೆಯಿತು.