ಮುಧೋಳದ ವಿಜಯ (ಎಂಆರ್‌ಎಸ್) ಸೌಹಾರ್ದ ಕ್ರೆಡಿಟ್ ಸಹಕಾರ ಸಂಘದ ಮೈಸೂರು ಶಾಖೆಯನ್ನು ಗುರುವಾರ ಜೆಪಿ ನಗರ ದಲ್ಲಿ ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಶಿವಾನಂದಪುರಿ ಸ್ವಾಮೀಜಿ, ಮುರುಗೇಶ್ ನಿರಾಣಿ, ಬಿ.ಸಿ. ಪಾಟೀಲ್, ಸಂದೇಶ್ ನಾಗರಾಜ್ ಹಾಗೂ ಇತರರು ಇದ್ದರು.  
ಜಿಲ್ಲೆ

ಮೈಸೂರಿನಲ್ಲಿ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರ ಸಂಘ ಕಾರ್ಯಾರಂಭ

ಮೈಸೂರು: ಮುಧೋಳದ ವಿಜಯ (ಎಂಆರ್‌ಎಸ್) ಸೌಹಾರ್ದ ಕ್ರೆಡಿಟ್ ಸಹಕಾರ ಸಂಘದ ಮೈಸೂರು ಶಾಖೆ ನಗರದ ಜೆಪಿ ನಗರದಲ್ಲಿ ಗುರು ವಾರ ಕಾರ್ಯಾರಂಭಗೊಂಡಿತು. ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂಘದ 75ನೇ ಶಾಖೆಯನ್ನು ಉದ್ಘಾಟಿಸಿದರು.

ಮಾಜಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರ ಸಂಘ 2007ರಲ್ಲಿ ಮುಧೋಳದಲ್ಲಿ ಪ್ರಾರಂಭಗೊಂಡಿತು. ಪ್ರಸ್ತುತ ಒಟ್ಟು 75 ಶಾಖೆಗಳು ಇದ್ದು, ಈ ಶಾಖೆಗಳನ್ನು 125ಕ್ಕೆ ಏರಿಕೆ ಮಾಡುವ ಗುರಿ ಹೊಂದಲಾಗಿದೆ. ಪ್ರಾರಂಭದಲ್ಲಿ 400 ಸದಸ್ಯರಿಂದ 10 ಲಕ್ಷ ರೂ. ಬಂಡವಾಳದೊಂದಿಗೆ ಪ್ರಾರಂಭಿಸಲಾಯಿತು. ಪ್ರಸ್ತುತ 2 ಲಕ್ಷ ಸದಸ್ಯರು, 21.60 ಕೋಟಿ ರೂ. ಷೇರು ಬಂಡವಾಳ ಹೊಂದಿದ್ದು, 2025-26ನೇ ಸಾಲಿನಲ್ಲಿ 65 ಸಾವಿರ ಕೋಟಿ ರೂ. ವಹಿವಾಟು ನಡೆಸಲಾಗಿದ್ದು, 60 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಸರ್ಕಾರಿ ರಜೆ ಸಂದರ್ಭದಲ್ಲೂ ನಮ್ಮ ಸಂಘ ಸೇವೆಯನ್ನು ಒದಗಿಸುತ್ತಿದೆ ಎಂದರು.

ರೈತರು ಬೆಳೆಯುವ ಬೆಳೆಗಳಿಗೆ ಪೂರಕವಾದ 40 ಕಾರ್ಖಾನೆಗಳನ್ನು ನಾವು ಪ್ರಾರಂಭಿಸಿದ್ದೇವೆ. 10 ಲಕ್ಷ ರೂ.ಬಂಡವಾಳದೊಂದಿಗೆ ನಾವು ಪ್ರಾರಂಭಿಸಿದ ಕಾರ್ಖಾನೆ ಇದೀಗ ಕರ್ನಾಟಕ ಮಾತ್ರವಲ್ಲದೆ ಗುಜರಾತ್, ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶದಲ್ಲಿ ಪ್ರಾರಂಭಿಸಿದ್ದೇವೆ. 72 ಸಾವಿರ ಜನರು ನಮ್ಮ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಪಿಒ ಆಗುವವರೆಗೆ ನಮ್ಮ ಸಂಸ್ಥೆ ಬೆಳೆದಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಲ್. ನಾಗೇಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜ್ ಹಾಗೂ ಇತರರು ಇದ್ದರು.

ಮುರುಗೇಶ್ ನಿರಾಣಿ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಜಾಗತಿಕ ಹೂಡಿಕೆಗೆ ಹೆಚ್ಚಿನ ಒತ್ತು ನೀಡಿದರು. ಅವರು ಹಾಕಿಕೊಟ್ಟ ಹಾದಿಯಲ್ಲಿ ರಾಜ್ಯ ಮುನ್ನಡೆಯುತ್ತಿದೆ. ನಿರಾಣಿ ಅವರ ಮಾರ್ಗದರ್ಶನದಲ್ಲಿ ವಿಜಯ (ಎಂಆರ್‌ಎಸ್) ಸೌಹಾರ್ದ ಕ್ರೆಡಿಟ್ ಸಹಕಾರ ಸಂಘ ಅತ್ಯುತ್ತಮವಾಗಿ ಮುನ್ನಡೆಯುತ್ತಿದ್ದು, ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಮಲ್ಟಿ ನ್ಯಾಷನಲ್ ಬ್ಯಾಂಕ್‌ಗಳಿಗೂ ಸವಾಲು ಒಡ್ಡುತ್ತಿದೆ.

ಬಿ.ಸಿ. ಪಾಟೀಲ್, ಮಾಜಿ ಸಚಿವ

ಜನರ ಬೇಡಿಕೆಗೆ ಅನುಗುಣವಾಗಿ ವಿಜಯ (ಎಂಆರ್‌ಎಸ್) ಸೌಹಾರ್ದ ಕ್ರೆಡಿಟ್ ಸಹಕಾರ ಸಂಘ ಪ್ರಾರಂಭಿಸಿರುವುದು ನಮ್ಮೆಲ್ಲರ ಸಯೋಗ. ಪ್ರತಿಯೊಬ್ಬರ ಅಭಿವೃದ್ಧಿಗೆ ಸಹಕಾರ ಸಂಘಗಳ ಅವಶ್ಯಕತೆ ಇದೆ. ಸಹಕಾರ ಚಳವಳಿ ರಾಜ್ಯದಿಂದಲೇ ಪ್ರಾರಂಭಗೊಂಡಿತು. ಈ ಸಹಕಾರ ಕ್ಷೇತ್ರ ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು.

ಶ್ರೀ ಶಿವಾನಂದಪುರಿ ಸ್ವಾಮೀಜಿ, ಶ್ರೀ ಕಾಗಿನೆಲೆ ಕನಕಗುರುಪೀಠ ಮೈಸೂರು ಶಾಖೆ

ಸಹಕಾರ ಕ್ಷೇತ್ರಕ್ಕೆ ದೇಶದಲ್ಲಿ ಪ್ರತ್ಯೇಕ ಮಂತ್ರಾಲಯ ಸ್ಥಾಪಿಸಲಾಗಿದ್ದು, ಈ ಮಂತ್ರಾಲಯ ಸ್ಥಾಪನೆಯಾದ ನಂತರ ದೇಶದಲ್ಲಿ 500 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಪ್ರಾರಂಭಗೊಂಡಿವೆ. ಸಹಕಾರ ಸಂಘಗಳನ್ನು ಮತ್ತಷ್ಟು ದೊಡ್ಡ ಮಟ್ಟದಲ್ಲಿ ಬೆಳೆಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ

ಉದ್ಯಮದ ಯಾವುದೇ ಹಿನ್ನೆಲೆ ಹೊಂದಿಲ್ಲದ ಒಬ್ಬ ಪದವೀಧರ ಮನಸ್ಸು ಮಾಡಿದರೆ ಉದ್ಯಮದಲ್ಲಿ ಸಾಮ್ರಾಜ್ಯವನ್ನೇ ಕಟ್ಟಬಹುದು ಎಂಬುದಕ್ಕೆ ಮುರುಗೇಶ್ ನಿರಾಣಿ ಉದಾಹರಣೆಯಾಗಿದ್ದಾರೆ. ದೇಶದ ಹಾಗೂ ರೈತರ ಅಭಿವೃದ್ಧಿಗೆ ಮುರುಗೇಶ್ ನಿರಾಣಿ ಕಾರ್ಖಾನೆಗಳನ್ನು ಪ್ರಾರಂಭಿಸಿದ್ದಾರೆ. ಮುರುಗೇಶ್ ನಿರಾಣಿ ರಾಜ್ಯದ ಅದಾನಿ, ಅಂಬಾನಿ ಇದ್ದಂತೆ, ಅವರು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ.

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಸುತ್ತೂರು ಮಠ

ಮುಧೋಳದ ವಿಜಯ (ಎಂಆರ್‌ಎಸ್) ಸೌಹಾರ್ದ ಕ್ರೆಡಿಟ್ ಸಹಕಾರ ಸಂಘದ ಮೈಸೂರು ಶಾಖೆಯನ್ನು ಗುರುವಾರ ಜೆಪಿ ನಗರ ದಲ್ಲಿ ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಶಿವಾನಂದಪುರಿ ಸ್ವಾಮೀಜಿ, ಮುರುಗೇಶ್ ನಿರಾಣಿ, ಬಿ.ಸಿ. ಪಾಟೀಲ್, ಸಂದೇಶ್ ನಾಗರಾಜ್ ಹಾಗೂ ಇತರರು ಇದ್ದರು.