ಚಿಕ್ಕಮಗಳೂರು: ಜಿಪಂ ನೂತನ ಉಪಾಧ್ಯಕ್ಷರಾಗಿ ಕುರುವಂಗಿ ಕ್ಷೇತ್ರದ ಬಿಜೆಪಿ ಸದಸ್ಯ ಬಿ.ಜಿ.ಸೋಮಶೇಖರ್ ಶನಿವಾರ ಅವಿರೋಧವಾಗಿ ಆಯ್ಕೆಯಾದರು.
ಪಕ್ಷದ ಒಳಒಪ್ಪಂದದ ಪ್ರಕಾರ ಜಿ.ಎನ್.ವಿಜಯಕುಮಾರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ಬೆಳಗ್ಗೆ ಸೋಮಶೇಖರ್ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 1 ಗಂಟೆಗೆ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಇತರರು ಯಾರೂ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಮೈಸೂರು ಪ್ರಾದೇಶಿಕ ಆಯುಕ್ತ ಡಾ. ಪ್ರಕಾಶ್ ಅವರು ಸೋಮಶೇಖರ್ ಆಯ್ಕೆಯನ್ನು ಘೊಷಿಸಿದರು.
ನಂತರ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಸೋಮಶೇಖರ್, ಎಲ್ಲರ ಸಹಕಾರದಿಂದ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವೆ. ಬಯಲು ಸೀಮೆ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಮಲೆನಾಡಿನ ಪ್ರದೇಶದಲ್ಲಿ ಕಳೆದ ಬಾರಿ ತೀವ್ರ ಅತಿವೃಷ್ಟಿಯಿಂದ ಸಾಕಷ್ಟು ಹಾನಿಯಾಗಿದ್ದು ಸುಧಾರಣೆಗೆ ಹೆಚ್ಚಿನ ಗಮನ ಹರಿಸಲಾಗುವುದು. ನಮ್ಮವರೇ ಆದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಸಮಸ್ಯೆಗಳನ್ನು ಗಮನಕ್ಕೆ ತಂದು ಜಿಲ್ಲೆಗೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುವುದಾಗಿ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ, ಮಾಜಿ ಸಚಿವ ಡಿ.ಎನ್.ಜೀವರಾಜ್, ಶಾಸಕರಾದ ಡಿ.ಎಸ್.ಸುರೇಶ್, ಬೆಳ್ಳಿಪ್ರಕಾಶ್, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಮಾಜಿ ಉಪಾಧ್ಯಕ್ಷ ಜಿ.ಎನ್.ವಿಜಯಕುಮಾರ್, ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಭೋಜೇಗೌಡ ಮತ್ತಿತರರು ಇದ್ದರು.