ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ 
ಜಿಲ್ಲೆ

ವೈಯಕ್ತಿಕ ಅಭಿವೃದ್ಧಿಗೆ ಕಾಂಗ್ರೆಸ್‌ನಲ್ಲಿ ಹುರುಪು: ಛಲವಾದಿ ನಾರಾಯಣಸ್ವಾಮಿ

ನವೀನ ಬಿ.ಎಂ

ಶಿವಮೊಗ್ಗ: ರಾಜ್ಯದಲ್ಲಿ ನಿಜವಾದ ಭಯೋತ್ಪಾದಕ, ಜಾತಿವಾದಿ, ಕುತಂತ್ರಕ್ಕೆ ಇನ್ನೊಂದು ಹೆಸರೇ ಮುಖ್ಯಮಂತ್ರಿ ಸಿದ್ದರಾಮಯ್ಯ. ಜನರ ದಾರಿ ತಪ್ಪಿಸುವುದರಲ್ಲಿ ಅವರು ನಿಸ್ಸೀಮರು ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

ಮುಡಾ ಕೇಸ್‌ನಲ್ಲಿ ಯಾರಿಗೂ ಜಗ್ಗಲ್ಲ, ಬಗ್ಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ರಾತ್ರೋರಾತ್ರಿ ನಿವೇಶನಗಳನ್ನು ಹಿಂದಿರುಗಿಸಿದ ಸಿಎಂ ಜಗ್ಗಿದ್ದೇಕೆ, ಬಗ್ಗಿದ್ದೇಕೆ? ಆನೆ ಕದ್ದರೂ ಕಳ್ಳನೇ, ಅಡಕೆ ಕದ್ದರೂ ಕಳ್ಳನೇ. ಅದಕ್ಕೆ ಇದೀಗ ಜನರೇ ಸಿದ್ದರಾಮಯ್ಯನನ್ನು ಸೈಟ್ ಕಳ್ಳ ಬಂದ ಎನ್ನುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
ಕಳೆದ ಒಂದೂವರೆ ವರ್ಷದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಗ್ಯಾರಂಟಿಗಳೂ ಜನರಿಗೆ ಮುಟ್ಟುತ್ತಿಲ್ಲ. ಅಭಿವೃದ್ಧಿಗೂ ದುಡ್ಡಿಲ್ಲ. ಖಜಾನೆ ಖಾಲಿಯಾಗಿದ್ದು ಸಾರ್ವಜನಿಕರ ತೆರಿಗೆ ಹಣ ಎಲ್ಲಿಗೆ ಹೋಗಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಸಂಪೂರ್ಣ ಮುಳುಗಿದೆ. ಕಾಂಗ್ರೆಸ್‌ನ ಪ್ರತಿಯೊಬ್ಬ ಸಚಿವನೂ ಒಂದಿಲ್ಲೊಂದು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ವಿಶ್ವಾಸದಿಂದಲೇ ಸ್ವಂತಕ್ಕೆ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಲೂಟಿಗೆ ಇಳಿದಿರುವ ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸಲು ಜನರೇ ನಿರ್ಧರಿಸಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಬಹಳಷ್ಟು ಸಚಿವರ ಮೇಲೆ ಭ್ರಷ್ಟಾಚಾರದ ಆರೋಪವಿದೆ. ಹಲವು ಸಚಿವರು ಜಾಮೀನಿನ ಮೇಲೆ ಹೊರಗಿದ್ದಾರೆ. ಹೀಗಿರುವಾಗಿ ಯಾವ ನೈತಿಕತೆ ಹೊತ್ತು ಮೂರು ಕ್ಷೇತ್ರಗಳ ಉಪ ಚುನಾವಣೆ ಎದುರಿಸುತ್ತೀರಿ? ಕಾಂಗ್ರೆಸ್‌ನಲ್ಲಿ ಚಿಕ್ಕದಾಗಿದ್ದ ಭ್ರಷ್ಟಾಚಾರ ಹೆಮ್ಮರವಾಗಿದೆ. ನಾನು ಅಲ್ಲಿದ್ದಾಗ ನನ್ನ ಜವಾಬ್ದಾರಿಗೆ ಅನುಗುಣವಾಗಿ ಮಾತನಾಡಬೇಕಿತ್ತು. ಬಿಜೆಪಿಗೆ ಬಂದ ಮೇಲೆ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಹಾಗಾಗಿ ತಪ್ಪು ಕಂಡುಬಂದರೆ ಪಕ್ಷಭೇದ ಮರೆತು ದನಿ ಎತ್ತುವುದು ನನ್ನ ಕರ್ತವ್ಯ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಎಸ್.ದತ್ತಾತ್ರಿ, ಚಂದ್ರಶೇಖರ್, ಶಿವರಾಜ್, ಮಾಲತೇಶ್, ವಿನ್ಸಂಟ್ ರೋಡ್ರಿಗಸ್, ಪದ್ಮಿನಿ ಸುದ್ದಿಗೋಷ್ಠಿಯಲ್ಲಿದ್ದರು.