ಕೋಲಾರ: ಬಾಲಗಂಗಾಧರ ತಿಲಕ್ ಗಣೇಶ ಸಮಿತಿಯಿಂದ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯು ಅದ್ದೂರಿಯಾಗಿ ನೆರವೇರಿತು.
ಮೆರವಣಿಗೆಗೆ ಮಾಜಿ ಸಂಸದ ಎಸ್.ಮುನಿಸ್ವಾಮಿ, ನಿರ್ಮಾಪಕ ಯುವರಾಜ್ ಕುಮಾರ್ ಸೋಮವಾರ ಎಂಜಿ ರಸ್ತೆಯಲ್ಲಿ ಚಾಲನೆ ನೀಡಿದರು. ಇದಕ್ಕೆ ಗಣೇಶ ಸಮಿತಿ ಸದಸ್ಯರು, ಯುವಕರು ಸಾಥ್ ನೀಡಿದರು.
ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ನಟ, ಯುವರಾಜ್ಕುಮಾರ್, ಗಣೇಶ ಚತುರ್ಥಿಯು ಯುವಕರಲ್ಲಿ ಹಿಂದು ಸಾಂಪ್ರದಾಯದ ಅರಿವನ್ನು ಮೂಡಿಸುತ್ತದೆ. ಆ ಮೂಲಕ ಅವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಹಬ್ಬದ ವಾತಾವರಣ ಸೃಷ್ಟಿ ಮಾಡುತ್ತಾರೆ ಎಂದು ಹೇಳಿದರು. ಹಿಂದು ಸಂಸತಿಯನ್ನು ಉಳಿಸುವ ನಿಟ್ಟಿನಲ್ಲಿ ಹಬ್ಬಗಳನ್ನು ಹೆಚ್ಚಾಗಿ ಆಚರಿಸಬೇಕು. ಇದೇ ರೀತಿ ಪ್ರತಿವರ್ಷವೂ ಮುಂದುವರೆಸಿಕೊಂಡು ಹೋಗಬೇಕು ಎಂದು ಕಿವಿ ಮಾತು ಹೇಳಿದರು.
ಕೋಲಾರ ಜಿಲ್ಲೆಗೆ ತನ್ನದೇ ಆದ ಇತಿಹಾಸವಿದ್ದು, ಅದು ಎಲ್ಲರಿಗೂ ಅರ್ಥವಾಗಬೇಕು. ಕೋಲಾರಕ್ಕೆ ಬರಬೇಕೆಂದು ಬಹಳಷ್ಟು ದಿನದಿಂದ ಆಸೆಯಿತ್ತು, ಅದು ಇಂದು ನೆರವೇರಿದೆ. ಕೋಲಾರದಲ್ಲಿ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಿರುವುದು ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು.
ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ನಾವು ಅಧಿಕಾರದಲ್ಲಿ ಮಾಜಿಗಳಾಗುತ್ತೇವೆ ಆದರೆ ದೇಶ-, ಧರ್ಮ ಎಂದಿಗೂ ಮಾಜಿ ಆಗುವುದಿಲ್ಲ. ಅದಕ್ಕಾಗಿ ವರ್ಷ ವರ್ಷ ವಿಜೃಂಭಣೆ ಹೆಚ್ಚಾಗಬೇಕೇ ಹೊರತು ಕಡಿಮೆಯಾಗಬಾರದು. ವರ್ಷದಿಂದ ವರ್ಷಕ್ಕೆ ಗಣೇಶ ಮೂರ್ತಿಗಳ ಸ್ಥಾಪನೆ ಹೆಚ್ಚಾಗಬೇಕು ಎಂದರು.
ಹಿಂದೆ ದೇಶಕ್ಕೆ ಸ್ವಾತಂತ್ರ$್ಯ ಬರುವುದಕ್ಕೆ ನಾವೆಲ್ಲರೂ ಒಗ್ಗಟ್ಟಾಗಿ ಏನಾದರೂ ಮಾತನಾಡಿಕೊಳ್ಳಲು ಬ್ರೀಟಿಷರು ಬಿಡುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಬ್ರೀಟಿಷರ ಆಳ್ವಿಕೆಯನ್ನು ಕರ್ನಾಟಕದಲ್ಲಿ ನೆನಪು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಗಣೇಶೋತ್ಸವ, ಶ್ರೀರಾಮಚಂದ್ರನ ದೇವಾಲಯ ಉದ್ಘಾಟನೆಗೆ, ಡಿಜೆ, ಮೆರವಣಿಗೆ, ಭಜನೆಗೆ ಅನುಮತಿ ಪಡೆಯಬೇಕಾದ ಪರಿಸ್ಥಿತಿ ಬಂದಿದೆ. ಕಾರಣ ನಮ್ಮಲ್ಲಿ ಒಗ್ಗಟ್ಟು ಇಲ್ಲದಿರುವುದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯುವಕರು ನಿರುತ್ಸಕರಾಗಿದ್ದರೆ ಮುಂದಿನ ಪೀಳಿಗೆಗೆ ಏನು ಸಂದೇಶ ನೀಡುತ್ತೀರಿ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಡಿಜೆ ಹಾಕುವುದಕ್ಕೆ ಅನುಮತಿ ಬೇಕೆಂದರೆ ನಾವು ಯಾವ ದೇಶದಲ್ಲಿದ್ದೇವೆ ಎಂದು ಪ್ರಶ್ನಿಸಿದರು.
ಡಿಜೆ ಹಾಕಿದ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೂ ಆಯೋಜಕರೇ ಹೊಣೆ ಎಂದು ಷರತ್ತು ವಿಧಿಸಿ ಮುಚ್ಚಳಿಕೆ ಬರೆಯಿಸಿಕೊಂಡು ಅನುಮತಿ ನೀಡಿ. ಆದರೆ, ಯಾವುದೇ ಕಾರಣಕ್ಕೂ ಧರ್ಮದ ವಿಚಾರದಲ್ಲಿ ತೊಂದರೆ ನೀಡದೆ ಎಲ್ಲ ಧರ್ಮದವರನ್ನೂ ಒಗ್ಗೂಡಿಸಿಕೊಂಡು ಹೋಗುವಂತೆಯೂ ತಿಳಿಸಿದ್ದೇನೆ. ಹೀಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಮುಂದುವರೆಯೋಣ ಎಂದು ಕರೆ ನೀಡಿದರು.
ಸತ್ಯನಾರಾಯಣ ಜ್ಯುವೆಲರ್ಸ್ ವೆಂಕಟೇಶ್, ಬಿಆರ್ಎಂ ಸಂತೋಷ್, ಬಜರಂಗದಳದ ಬಾಲಾಜಿ, ಬಾಬು, ಡಿ.ಆರ್.ನಾಗರಾಜ್, ಮಂಜುನಾಥ್, ವಿಶ್ವನಾಥ್, ರವಿ, ಶ್ರೀಧರ್, ದೀಪು, ವಿಶಾಕ, ನಾಗೇಶ್, ಕನಕೇಶ್ ಇತರರಿದ್ದರು.
ಕಲಾ ತಂಡಗಳ ಮೆರಗು
ನಗರದ ವಿವಿಧ ಬಡಾವಣೆಗಳಿಂದ ಗಣೇಶ ಮೂರ್ತಿಗಳನ್ನು ತಂದು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಕೋಲಾರಮ್ಮ ಕೆರೆಯ ಬಳಿ ನಗರಸಭೆ ವತಿಯಿಂದ ನಿರ್ಮಿಸಿರುವ ಹೊಂಡದಲ್ಲಿ ವಿಸರ್ಜನೆ ಮಾಡಲಾಯಿತು. ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಮೆರವಣಿಗೆಗೆ ಕಲಾ ತಂಡಗಳು ಮೆರಗು ನೀಡಿದವು.