ಚಿಕ್ಕಬಳ್ಳಾಪುರ: ಗೌರಿಬಿದನೂರು ನಗರದ ಸರ್ಕಾರಿ ಆಸ್ಪತ್ರೆಗೆ ಇಲಾಖೆಯ ಜಾಗೃತ ದಳದ ಅಧಿಕಾರಿ ಶ್ರೀನಿವಾಸ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಆಗ ಬೆರಳೆಣಿಕೆಯಷ್ಟು ಮಂದಿ ವೈದ್ಯರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು. ಅನೇಕ ವೈದ್ಯರು ಬಾರದಿರುವ ಹಿನ್ನೆಲೆಯಲ್ಲಿ ರೋಗಿಗಳು ಕಾಯುತ್ತಿರುವ ದೃಶ ಕಂಡು ಬಂತು.
*ಸಂಬಂಧಿಕರಿಗೆ ಕರೆ*
ಹೆರಿಗೆ ಕೋಣೆಗೆ ತೆರಳಿ ಜಾಗೃತ ದಳದ ಅಧಿಕಾರಿ ಶ್ರೀನಿವಾಸ್, ಹೆರಿಗೆಗೆ ದಾಖಲಾಗಿದ್ದ ರೋಗಿಯ ಸಂಬಂಧಿಕರಿಗೆ ಕರೆ ಮಾಡಿದರು. ಹೆರಿಗೆ ಕಾರಣಕ್ಕೆ ಆಸ್ಪತ್ರೆಗೆ ಬಂದಿದ್ದೇವೆ. ನಾವು ನಿಮ್ಮ ಸಂಬಂಧಿಕರ ಪಕ್ಕದ ಬೆಡ್ ನಲಿ ಇದ್ದೇವೆ. ಚಿಕಿತ್ಸೆಗೆ ಹಣ ನೀಡಬೇಕೆ?. ನೀವು ಎಷ್ಟು ಹಣ ನೀಡಿದ್ದೀರಾ? ಎಂದು ಪ್ರಶ್ನಿಸಿದರು. ನಾವು ಯಾವುದೇ ರೀತಿ ಹಣ ನೀಡಿಲ್ಲ. ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಪ್ರತ್ಯುತ್ತರ ಬಂತು.
ಔಷಧಿ ಕೇಂದ್ರದಲ್ಲಿ ಒಬ್ಬರೇ ಕಾರ್ಯನಿರ್ವಹಿಸುತ್ತಿದ್ದು, ಇನ್ನೊಬ್ಬರನ್ನು ನಿಯೋಜಿಸಬೇಕು. ಪ್ರಯೋಗಾಲಯದಲ್ಲಿ ಸ್ವಚ್ಚತೆ ಕಾಪಾಡುವ ಜೊತೆಗೆ ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು ಎಂದು ಆಸ್ಪತ್ರೆ ಆಡಳಿತಾಧಿಕಾರಿಗೆ ಸೂಚಿಸಿದರು.
*ಮಾನವೀಯತೆ ಕೊರತೆ*
ಪ್ರತ್ಯೇಕ ಅಧಿಕಾರಿಗಳ ಹಾಗೂ ಮುಖಂಡರ ಸಭೆ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಆಸ್ಪತ್ರೆಯಲ್ಲಿ ಮಾನವೀಯತೆ ಕೊರತೆ ಕಾಡುತ್ತಿದೆ. ಅನೇಕ ಮಂದಿ ವೈದ್ಯರು ನೆಪಮಾತ್ರಕ್ಕೆ ಇಲ್ಲಿ ಕೆಲಸ ಮಾಡುತ್ತಿದ್ದು, ಹಣದ ಆಸೆಗೆ ಬಿದ್ದು ಖಾಸಗಿಯಾಗಿ ಕ್ಲಿನಿಕ್ ನಡೆಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದರು. ನಗರಸಭೆ ಮಾಜಿ ಸದಸ್ಯ ಚಂದ್ರಮೋಹನ ಮಾತನಾಡಿ, ರೋಗಿಗಳನ್ನು ಒಂದೆಡೆಯಿಂದ ಒಂದೆಡೆಗೆ ಸಾಗಿಸಲು ಅಟೆಂಡ ಇಲ್ಲ. ವ್ಹೀಲ್ ಚೇರ್ ಹಾಗೂ ಫ್ಯಾನುಗಳ ಕೊರತೆಯಿವೆ ಎಂಬುದನ್ನು ಗಮನಕ್ಕೆ ತಂದರು.
*ಸರಕಾರಿ ಆಸ್ಪತ್ರೆಗಳು ಪ್ರಬಲವಾಗಿವೆ*
ಸರಕಾರಿ ಆಸ್ಪತ್ರೆಗಳು ಇಂದು ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುವಷ್ಟು ಪ್ರಬಲವಾಗಿವೆ. ಎಲ್ಲ ಸೌಕರ್ಯಗಳು ಇಲ್ಲಿ ದೊರೆಯುತ್ತವೆ. ಇಲ್ಲಿನ ಆಸ್ಪತ್ರೆಗೆ ಕನಿಷ್ಠ ವಾರ್ಷಿಕ 1 ಕೋಟಿ ಅನುದಾನ ಬರುತ್ತದೆ. ಔಷಧಿಗಳಿಗೂ ಕೊರತೆಯಿಲ್ಲ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾಯಿಸಿಕೊಂಡರೆ ಉಚಿತವಾಗಿ ಚಿಕಿತ್ಸೆ ದೊರೆಯುತ್ತದೆ. ಇಲ್ಲಿ ನೀಡಲು ಸಾಧ್ಯವಾಗದ ಚಿಕಿತ್ಸೆಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ಕೊಡಿಸಲಾಗುವುದು. ಹಣವನ್ನು ಸರಕಾರವೇ ಭರಿಸಲಿದೆ. ಸರಕಾರಿ ಆಸ್ಪತ್ರೆಗಳನ್ನು ಬಳಸಿಕೊಳ್ಳಿ. ಯಾವುದೇ ರೀತಿಯ ಭಷ್ಟಾಚಾರದ ದೂರುಗಳಿದ್ದಲ್ಲಿ ನೇರವಾಗಿ ನಮ್ಮ ಜಾಗೃತ ದಳಕ್ಕೆ ದೂರು ನೀಡಿ, ನಿರ್ಧಾಕ್ಷಿಣ್ಯವಾಗಿ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಅಧಿಕಾರಿ ಶ್ರೀನಿವಾಸ್ ತಿಳಿಸಿದರು.