ಜಿಲ್ಲೆ

ವಿಧಾನಸೌಧಕ್ಕೆ ಮುತ್ತಿಗೆ ಎಚ್ಚರಿಕೆ

ರವಿ ಎಸ್. ಬಳೂಟಗಿ

ಲಕ್ಷ್ಮೇಶ್ವರ: ಕೆಸ್‌ಆರ್‌ಟಿಸಿ ಬಸ್ ಟಿಕೆಟ್ ದರವನ್ನು ಅವೈಜ್ಞಾನಿಕವಾಗಿ ಏರಿಸಿರುವುದನ್ನು ವಿರೋಧಿಸಿ ಸೋಮವಾರ ಪಟ್ಟಣದ ಬಸ್ ನಿಲ್ದಾಣದ ಎದುರು ಎಬಿವಿಪಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ಅಭಿಷೇಕ ಉಮಚಗಿ ಮಾತನಾಡಿ, ರಾಜ್ಯ ಸರ್ಕಾರ ಏರಿಸಬೇಕಿರುವುದು ಬಸ್ ಟಿಕೆಟ್ ದರವನ್ನಲ್ಲ, ಬದಲಿಗೆ ಬಸ್‌ಗಳ ಸಂಖ್ಯೆ. ಹೆಚ್ಚುವರಿ ಬಸ್ ಸಂಚಾರಕ್ಕೆ ಬಿಟ್ಟು ವಿದ್ಯಾರ್ಥಿಗಳಿಗಾಗುತ್ತಿರುವ ತೊಂದರೆ ತಪ್ಪಿಸಬೇಕು. ಹೆಚ್ಚಳ ಮಾಡಿರುವ ದರವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯ ಎಬಿವಿಪಿಯಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ವಾಸುದೇವಸ್ವಾಮಿ ಮನವಿ ಸ್ವೀಕರಿಸಿದರು. ತಾಲೂಕು ಸಂಚಾಲಕ ಪ್ರಕಾಶ ಕುಂಬಾರ, ಸಹ ಸಂಚಾಲಕ ವಿನಯ ಸಪಡ್ಲ, ನಗರ ಕಾರ್ಯದರ್ಶಿ ಅಭಿಷೇಕ ಉಮಚಗಿ, ಸಹ ಕಾರ್ಯದರ್ಶಿ ಯಶವಂತ ಶಿರಹಟ್ಟಿ, ಹೋರಾಟ ಪ್ರಮುಖ ಮನೋಜ ತಂಡಗೇರ, ವಿನಾಯಕ ಕುಂಬಾರ, ಅಭಿಷೇಕ ಇಸನಗೌಡರ್, ಕಾರ್ಯಕರ್ತರಾದ ವಿನಾಯಕ ಹುಂಬಿ, ಅರವಿಂದ ಇಚಾಂಗಿ, ಯುವರಾಜ ದುರ್ಗದ, ಈರಣ್ಣ ಕುಂಬಾರ, ಕಿರಣ ಗುಡಗೇರಿ ಭಾಗವಹಿಸಿದ್ದರು.