ಜಿಲ್ಲೆ

ಮೈಸೂರು ರಂಗಾಯಣದ ಚಿಣ್ಣರ ಮೇಳ ಅರ್ಜಿಗಾಗಿ ಜಾಗರಣೆ; ರಾತ್ರಿಯಿಡೀ ಸರತಿಯಲ್ಲಿ ಕಾಯ್ದ ಪಾಲಕರು

ಮೈಸೂರು: ರಂಗಾಯಣ ವತಿಯಿಂದ ಆಯೋಜಿಸುವ ಚಿಣ್ಣರ ಮೇಳದ ಅರ್ಜಿಗಾಗಿ ಪಾಲಕರು ರಾತ್ರಿಯಿಡೀ ಕಾಯ್ದರು. ಅರ್ಜಿ ಪಡೆಯುತ್ತಿದ್ದಂತೆ ಸಂಭ್ರಮದಿಂದ ಹಿರಿಹಿರಿ ಹಿಗ್ಗಿದರು.


ಏ.12ರಿಂದ ಚಿಣ್ಣರ ಮೇಳ ಶುರುವಾಗಲಿದ್ದು, ಅದಕ್ಕಾಗಿ ಅರ್ಜಿ ವಿತರಣೆಗೆ ಮಂಗಳವಾರ ದಿನಾಂಕ ನಿಗದಿ ಮಾಡಲಾಗಿತ್ತು. ಹೀಗಾಗಿ ಅರ್ಜಿ ಪಡೆಯಲು ಸೋಮವಾರ ರಾತ್ರಿಯೇ ಪಾಲಕರು ರಂಗಾಯಣಕ್ಕೆ ಬಂದಿದ್ದರು. ರಾತ್ರಿಯಿಡೀ ಸರತಿ ಸಾಲಿನಲ್ಲಿ ನಿಂತರಲ್ಲದೆ ಮಂಗಳವಾರ ಬೆಳಗ್ಗೆವರೆಗೂ ಜಾಗರಣೆ ಮಾಡಿದರು. ಪಾಳಿಯಲ್ಲಿ ನಿಂತುಕೊಂಡವರ ಹೆಸರು, ಮಗುವಿನ ಹೆಸರನ್ನು ಪಾಲಕರೇ ಬರೆದುಕೊಂಡರು.


ಬೆಳಗ್ಗೆ ಆಗುತ್ತಿದ್ದಂತೆ ರಾತ್ರಿಯಿಡೀ ಕಾದ ಪತಿಯನ್ನು ಮನೆಗೆ ಕಳುಹಿಸಿಕೊಟ್ಟ ಮಹಿಳೆಯರು ಮಧ್ಯಾಹ್ನ 12ರವರೆಗೂ ಕಾದು ಕುಳಿತು, ಅರ್ಜಿ ಪಡೆದು ಮನೆಯತ್ತ ಹೊರಟರು.


ಬೆಳಗ್ಗೆ 6 ಗಂಟೆ ವೇಳೆಗೆ ಸುಮಾರು 250 ಪಾಲಕರು ಜಮಾಯಿಸಿದ್ದರು. ರಂಗಾಯಣದ ಗೇಟ್ ತೆರೆದು ಅವರನ್ನು ಆವರಣದೊಳಗೆ ಬಿಡಲಾಯಿತು. ನಂತರ, ತಯಾರಿಸಿದ್ದ ಪಟ್ಟಿ ಪ್ರಕಾರ ಕರೆದು ಅರ್ಜಿಯನ್ನು ಬೆಳಗ್ಗೆ 10ರಿಂದ ವಿತರಣೆ ಮಾಡಲಾಯಿತು.


ಈ ಸಲವೂ ಮೇಳದ 300 ಪ್ರವೇಶ ಅರ್ಜಿ ವಿತರಿಸಲಾಗಿದೆ. ಕೊನೆವರೆಗೂ ಅರ್ಜಿ ಸಿಗಬಹುದೆಂಬ ನಿರೀಕ್ಷೆಯಲ್ಲಿ ಹಲವು ಪಾಲಕರು ಕಾಯ್ದರು. ಕೆಲವರು ಅರ್ಜಿ ಸಿಗದೆ ವಾಪಸ್ ಆದರು. ಪಾಲಕರೇ ಜವಾಬ್ದಾರಿಯಿಂದ ಸರತಿ ಸಾಲು ಮಾಡಿಕೊಂಡು ಶಿಸ್ತಿನಿಂದ ಕಾಯ್ದಿದ್ದರು. ಅದರಿಂದ ಯಾವುದೇ ಗೊಂದಲಕ್ಕೆ ಅವಕಾಶ ಇರಲಿಲ್ಲ.

‘ಸಮರಸವೇ ಜೀವನ’ ಈ ಬಾರಿಯ ಆಶಯ


ಪ್ರತಿ ಬೇಸಿಗೆ ರಜೆ ಸಂದರ್ಭದಲ್ಲಿ ಚಿಣ್ಣರ ಮೇಳವನ್ನು ಕಳೆದ 25 ವರ್ಷದಿಂದ ಏರ್ಪಡಿಸಲಾಗುತ್ತಿದೆ. ‘ಸಮರಸವೇ ಜೀವನ’ ಈ ಬಾರಿ ಮೇಳದ ಆಶಯವಾಗಿದೆ. ರಂಗಭೂಮಿ, ಸಾಂಸ್ಕೃತಿಕ ಕಲೆಗಳು, ಪರಿಸರ ಚಟುವಟಿಕೆಗಳು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಮಕ್ಕಳಿಗೆ ಕಲಿಸಲಾಗುತ್ತಿದೆ. ಅದಕ್ಕಾಗಿ ಸಂಪನ್ಮೂಲ ವ್ಯಕ್ತಿಗಳನ್ನೂ ನಿಗದಿಪಡಿಸಲಾಗಿದೆ.


ಯಾರು ಮೊದಲು ಬರುತ್ತಾರೋ ಅವರಿಗೆ ಆದ್ಯತೆಯೆಂದು ಮೊದಲೇ ತಿಳಿಸಲಾಗಿತ್ತು. ಬೇಡಿಕೆ ಇದ್ದರೂ ಹೆಚ್ಚು ಮಕ್ಕಳನ್ನು ಸೇರಿಸಿಕೊಳ್ಳಲಾಗುವುದಿಲ್ಲ. ಮಕ್ಕಳು ಆಡಿ ನಲಿಯಲು ಬೇಕಾದ ಅಂಗಳದ ಸಾಮರ್ಥ್ಯ, ಕಲಿಕೆಗೆ ಅನುಗುಣವಾಗಿ ಪ್ರವೇಶ ಸಂಖ್ಯೆಯನ್ನು 300ಕ್ಕೆ ಸಿಮೀತಗೊಳಿಸಲಾಗಿದೆ ಎಂದು ರಂಗಾಯಣ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ವಿಜಯವಾಣಿಗೆ ತಿಳಿಸಿದರು.


ಪಠ್ಯೇತರ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನೀಡಬೇಕು. ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಹೀಗಾಗಿಯೇ ಪ್ರವೇಶಾತಿ ಮಿತಿಗೊಳಿಸಲಾಗಿದೆ. ಮಕ್ಕಳ ವಯಸ್ಸಿಗೆ ಅನುಗುಣವಾಗಿ 9ರಿಂದ 10 ತಂಡಗಳನ್ನು ಮಾಡಲಾಗುತ್ತದೆ. ರಂಗಾಯಣ 40 ಜನ ಕಲಾವಿದರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು. ಅದಲ್ಲದೆ ಚಟುವಟಿಕೆಗಳ ಸಹಾಯಕರಾಗಿ ಭಾರತೀಯ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳೂ ತೊಡಗಿಸಿಕೊಳ್ಳುವರು. ಮೇ 7 ಅಥವಾ 8ರಂದು ಸಮಾರೋಪ ನಡೆಯಲಿದೆ ಎಂದು ಮಾಹಿತಿ ನೀಡಿದರು.