ನಂಜನಗೂಡು: ದಕ್ಷಿಣಕಾಶಿ ನಂಜನಗೂಡಿನ ನಂಜುಂಡೇಶ್ವರನ ದೇವಾಲಯದಲ್ಲಿ ಬುಧವಾರ ಮಹಾ ಶಿವರಾತ್ರಿ ಸಂಭ್ರಮ ಮನೆ ಮಾಡಿತ್ತು. ನಾಡಿನ ಮೂಲೆ ಮೂಲೆಗಳಿಂದ ಬಂದ ಸಾವಿರಾರು ಭಕ್ತರು ಗಂಟೆಗಳ ಕಾಲ ಸರತಿಯಲ್ಲಿ ಸಾಗಿ ಶ್ರೀಕಂಠನ ದರ್ಶನ ಪಡೆದರು.
ಶಿವರಾತ್ರಿ ಹಬ್ಬದ ಅಂಗವಾಗಿ ಇಂದು ಶ್ರೀ ನಂಜುಂಡೇಶ್ವರ ಸ್ವಾಮಿಗೆ ಮುಂಜಾನೆ ನಾಲ್ಕು ಗಂಟೆಯಿಂದಲೇ ರುದ್ರಾಭಿಷೇಕ ಸೇರಿದಂತೆ ಹಲವು ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಬೆಳಗ್ಗೆ 5 ಗಂಟೆಯಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕಪಿಲೆಯಲ್ಲಿ ಮಿಂದ ಭಕ್ತರು ನಂಜುಂಡೇಶ್ವರನ ದರುಶನ ಪಡೆದು ಪುನೀತರಾದರು.
ನದಿ ದಡದಲ್ಲಿ ಹೈ ಅಲರ್ಟ್: ನಂಜುಂಡೇಶ್ವರನ ಸನ್ನಿಧಿಗೆ ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಾಕಷ್ಟು ಭಕ್ತ ಸಮೂಹ ಕಪಿಲಾ ನದಿಯಲ್ಲಿ ಮಿಂದೆದ್ದು ದೇವಾಲಯಕ್ಕೆ ಆಗಮಿಸಿ ನಂಜುಂಡೇಶ್ವರನ ದರ್ಶನ ಪಡೆಯುವ ಹಿನ್ನೆಲೆಯಲ್ಲಿ ನದಿ ತಟದಲ್ಲಿ ಕಳ್ಳತನ ಪ್ರಕರಣ ಹಾಗೂ ಅವಘಡ ತಡೆಗಟ್ಟುವ ನಿಟ್ಟಿನಲ್ಲಿ ಧ್ವನಿವರ್ಧಕಗಳ ಮೂಲಕ ಭಕ್ತರನ್ನು ಜಾಗೃತಿ ಮೂಡಿಸಲಾಗುತ್ತಿತ್ತು.
ಜಾಗರಣೆಗೆ ಭಾಗಿಯಾದ ಜನ: ಪ್ರತಿ ವರ್ಷದಂತೆ ದೇವಾಲಯದ ಮುಂಭಾಗದಲ್ಲಿ ರಾತ್ರಿ ಆಯೋಜಿಸಿದ್ದ ಜಾಗರಣೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದೇವರ ಭಕ್ತಿಗೆ ಪಾತ್ರರಾದರು. ನಂಜುಂಡೇಶ್ವರನ ಸನ್ನಿಧಿಯಲ್ಲಿ ಜಾಗರಣೆ ಮಾಡಿದರೆ ಬೇಡಿದ ಕಾರ್ಯ ಈಡೇರುತ್ತದೆ ಎಂಬ ನಂಬಿಕೆಯಿಂದ ಭಕ್ತರು ಜಾಗರಣೆ ಪಾಲ್ಗೊಳ್ಳುತ್ತಾರೆ.
ಮುಜರಾಯಿ ಇಲಾಖೆ ಮತ್ತು ಜಿಲ್ಲಾಡಳಿತದಿಂದ ಜಾಗರಣೆ ವಿಶೇಷ ಕಾರ್ಯಕ್ರಮದಲ್ಲಿ ದೇವರ ಭಜನೆ ಸೇರಿದಂತೆ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
150ಕ್ಕೂ ಹೆಚ್ಚು ಪೊಲೀಸರ ನಿಯೋಜನೆ: ನಂಜುಂಡೇಶ್ವರನ ಸನ್ನಿಧಿಗೆ ಸಾಂಪ್ರದಾಯದಂತೆ ಮಹಾಶಿವರಾತ್ರಿಯ ಹಿನ್ನೆಲೆ ನಾಡಿನ ವಿವಿಧ ಮೂಲೆಗಳಿಂದ ಸಾಕಷ್ಟು ಭಕ್ತ ಸಮೂಹ ಆಗಮಿಸುತ್ತದೆ. ಹೀಗಾಗಿ ದೇಗುಲ ಸುತ್ತಮುತ್ತ ಸುಮಾರು ನೂರಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನಿಗವಹಿಸಲಾಗಿತ್ತು. ಕಳ್ಳತನ ಪ್ರಕರಣಗಳಿಗೆ ಬ್ರೇಕ್ ಹಾಕುವ ಸಲುವಾಗಿ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.
ಸಿಹಿ ಭೋಜನ ವ್ಯವಸ್ಥೆ: ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿರುವ ದೆಸೆಯಿಂದ ಪ್ರತಿ ತಿಂಗಳು ಕೋಟಿ ರೂ. ಆದಾಯ ಗಳಿಸುವ ಶ್ರೀಮಂತ ದೇವಾಲಯಗಳಲ್ಲಿ ನಂಜನಗೂಡಿನ ನಂಜುಂಡೇಶ್ವರನ ದೇವಾಲಯವು ಕೂಡ ಒಂದಾಗಿದೆ. ನಾಡಿನ ವಿವಿಧ ಮೂಲಗಳಿಂದ ಆಗಮಿಸುವ ಭಕ್ತರಿಗೆ ಕೊರತೆ ಇಲ್ಲದ ರೀತಿಯಲಿ ಮೂಲಸೌಲಭ್ಯ ಕಲ್ಪಿಸಿಕೊಡುವ ಜತೆಗೆ ದಾಸೋಹ ಭವನದಲ್ಲಿ ಸಿಹಿ ಭೋಜನ ಕಲ್ಪಿಸಲಾಗುತ್ತಿದೆ ಎಂದು ದೇವಾಲಯದ ಕಾರ್ಯನಿರ್ವಣಾಧಿಕಾರಿ ಜಗದೀಶ್ ಕುಮಾರ್ ಮಾಹಿತಿ ನೀಡಿದರು.