ಮೈಸೂರು: ಮನಸ್ಸನ್ನು ವಿಕೃತಿಗೊಳಿಸುವ ಮಾಲ್‌ಗಳು ತಲೆ ಎತ್ತುತ್ತಿದ್ದರೂ ಧ್ವನಿ ಎತ್ತದವರು ವ್ಯಕ್ತಿತ್ವವನ್ನು ಕಟ್ಟುವ ವಿವೇಕ ಸ್ಮಾರಕ ನಿರ್ಮಿಸಲು ವಿವಿಧ ವಿಘ್ನ ತಂದೊಡ್ಡುವುದು ಎಷ್ಟು ಸರಿ ಎಂದು ಆದಿಚುಂಚನಗಿರಿ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ತಿನಿಂದ ನಗರದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ 9ನೇ ವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಷಿಕಾಗೋ ಧಾರ್ಮಿಕ ಸಮ್ಮೇಳನಕ್ಕೆ ತೆರಳುವ ಮುನ್ನ ಮೈಸೂರಿನಲ್ಲಿ ತಂಗಿದ್ದ ಸ್ಥಳದಲ್ಲಿ ಯುವಕರ ಮನಸ್ಸನ್ನು ವಿಕಸನಗೊಳಿಸುವ ಸೌಧ ನಿರ್ಮಿಸಲು ಹೋದಾಗ ಹಲವು ಅಡ್ಡಿಗಳು ಉಂಟಾಗಿ ಕಾರ್ಯ ನಿಧಾನವಾಗುತ್ತಿದೆ. ಆದರೆ ಯುವ ಜನಾಂಗವನ್ನು ವಿಕೃತಿಗೆ ತಳ್ಳುವ ಮಾಲ್‌ಗಳು ಅಲ್ಲಲ್ಲಿ ತಲೆ ಎತ್ತುತ್ತಿದ್ದರೂ ಯಾವುದೇ ಚಕಾರ ಎತ್ತುತ್ತಿಲ್ಲ. ನಮ್ಮ ಸಂಸ್ಕೃತಿ, ಧರ್ಮ, ಆಚಾರ ವಿಚಾರ ಎಲ್ಲಿಗೆ ಹೋಗಿ ನಿಂತಿದೆ ಎನ್ನುವುದು ಕಂಡು ಬೇಸರವಾಗುತ್ತದೆ ಎಂದರು.
ತತ್ವ, ಆದರ್ಶಕ್ಕೆ ಸಾಕ್ಷಿಯಾಗಲಿದೆ:
ದೇಶ ದಾಸ್ಯದಲ್ಲಿ ಮುಳುಗಿದ್ದ ಸಂದರ್ಭದಲ್ಲಿ ರಾಮಕೃಷ್ಣ ಪರಮಹಂಸರ ಪ್ರೇರಣೆಯಿಂದ ಹಿಂದು ಧರ್ಮಕ್ಕೆ ಗೌರವ ತಂದುಕೊಟ್ಟಿದ್ದು ಸ್ವಾಮಿ ವಿವೇಕಾನಂದರು. ವಿದೇಶಗಳಿಗೆ ತೆರಳುವ ಧರ್ಮಗುರುಗಳಿಗೆ ಗೌರವ ಸಿಗುತ್ತಿದೆ ಎಂದಾದರೆ ಅದಕ್ಕೆ ಕಾರಣ ಸ್ವಾಮಿ ವಿವೇಕಾನಂದರ ಪ್ರಭಾವ. ಹಾಗಾಗಿ ಅವರ ತತ್ವ, ಆದರ್ಶವನ್ನು ಯುವಜನಾಂಗ ಪಾಲಿಸಲು ವಿವೇಕಸೌಧ ಸಾಕ್ಷಿಯಾಗಿ ನಿಲ್ಲಲಿದೆ ಎಂದು ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬಣ್ಣಿಸಿದರು.
ಭಾರತವನ್ನು ಮತ್ತೆ ಕಟ್ಟಬೇಕಿದೆ:
ಅಧ್ಯಕ್ಷತೆ ವಹಿಸಿದ್ದ ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಮಾತನಾಡಿ, ಧರ್ಮ ನೆಲೆಯಲ್ಲಿ ಭವ್ಯವಾಗಿದ್ದ ಭಾರತವನ್ನು ನಾವು ಮತ್ತೆ ಕಟ್ಟಬೇಕಿದೆ. ಪ್ರಜಾಪ್ರಭುತ್ವದಲ್ಲಿ ಆಳುವ ವರ್ಗದವರ ದಾಸ್ಯ, ಆಮಿಷಕ್ಕೆ ಬಲಿಯಾಗಿ ಧರ್ಮ, ಐಕ್ಯತೆ, ಸಂಸ್ಕೃತಿ ಕ್ಷೀಣಿಸುತ್ತದೆ ಎಂದು ಬೇಸರಿಸಿದರು.
ಬೆಳೆಯುವವರನ್ನು ಪ್ರೋತ್ಸಾಹಿಸಿ: ವಿದೇಶದಲ್ಲಿ ಹತ್ತು ಜನ ಸೇರಿ ಕಟ್ಟಿದ ಕಂಪನಿ ಕೆಲ ವರ್ಷಗಳಲ್ಲಿ ವಿವಿಧ ದೇಶಗಳಿಗೆ ವಿಸ್ತರಿಸಿ ಬೆಳೆಯುತ್ತದೆ. ಆದರೆ ಭಾರತದಲ್ಲಿ ಹತ್ತು ಜನರು ಸೇರಿ ನಿರ್ಮಿಸಿದ ಕಂಪನಿ ಕೆಲವು ವರ್ಷಗಳಲ್ಲಿಯೇ ಹರಿದು ನಾಲ್ಕೈದು ಭಾಗವಾಗುತ್ತದೆ. ನಮ್ಮಲ್ಲಿ ಬೆಳೆಯುವವರನ್ನು ಪ್ರೋತ್ಸಾಹಿಸಬೇಕು ಎನ್ನುವ ಮನಸ್ಸು ಕಡಿಮೆಯಾಗಿದೆ. ಅಸೂಯೆ, ದ್ವೇಷದ ಭಾವನೆ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ದಿವ್ಯತ್ರಯರ ಸಂದೇಶ ಪ್ರಸ್ತುತ ಎಂದರು.
ಸರ್ಕಾರಗಳು ಇನ್ನೂ ಜಾಗೃತವಾಗಿಲ್ಲ:
ಗದಗ-ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಾತನಾಡಿ, ನಮ್ಮ ಸರ್ಕಾರಗಳು ಇನ್ನೂ ಜಾಗೃತ ಆಗಿಲ್ಲ. ಹೀಗಾಗಿ, ಪ್ರಜ್ಞಾವಂತ ಸಮಾಜದವರೇ ಇಂತಹ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಯ ಸದುದ್ದೇಶವನ್ನು ಮನಗಾಣಬೇಕು. ಸಮಾಜಕ್ಕೆ ಉಪಯುಕ್ತವಾದ ಆಲೋಚನೆ, ಯೋಜನೆಗಳನ್ನು ನೀಡಬೇಕು ಎಂದರು.
ಸ್ವಾಮಿ ವಿವೇಕಾನಂದರ ಆಶಯದಂತೆ ಹಿಂದುಗಳು ಬಲಿಷ್ಠ ಯೋಚನೆಗಳನ್ನು ಮನಗಾಣಬೇಕು. ವೇದ, ಉಪನಿಷತ್ತುಗಳು ಜೀವನದ ದೀವಿಗೆಗಳಿದ್ದಂತೆ. ವ್ಯಕ್ತಿತ್ವ ಬದಲಾಗದಿದ್ದರೆ ಸಮಾಜದ ಬದಲಾವಣೆ ಸಾಧ್ಯವಿಲ್ಲ ಎನ್ನುವುದನ್ನು ಯುವಜನಾಂಗ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂದೇಶ ಎಲ್ಲರನ್ನೂ ತಲುಪಲಿ:
ರಾಣೆಬೆನ್ನೂರಿನ ಸ್ವಾಮಿ ಪ್ರಕಾಶಾನಂದಜೀ ಮಾತನಾಡಿ, ಸಮಾಜಕ್ಕೆ ಮಹಾತ್ಮರ ಸಂದೇಶಗಳು ಹಿಂದಿಗಿಂತ ಹೆಚ್ಚು ಅಗತ್ಯ ಇದೆ. ಯಾವುದೇ ಜಾತಿ ಭೇದವಿಲ್ಲದೆ ವಿವೇಕಾನಂದರ ಸಂದೇಶಗಳು ಎಲ್ಲರನ್ನೂ ತಲುಪಬೇಕಿದೆ. ಕುವೆಂಪು ಅವರಿಗೆ ವಿಶ್ವಮಾನವ ತತ್ವಕ್ಕೆ ವಿವೇಕಾನಂದರೇ ಪ್ರೇರಣೆ. ವಿವೇಕಾನಂದರ ಸಂಪರ್ಕಕ್ಕೆ ಬಂದ ಎಲ್ಲರೂ ವಿಶ್ವಮಾನವರಾಗಬೇಕು. ಆಗಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಆಂಧ್ರಪ್ರದೇಶ ವಿಜಯವಾಡದ ರಾಮಕೃಷ್ಣ ಮಿಷನ್‌ನ ಸ್ವಾಮಿ ವಿನಿಶ್ಚಲಾನಂದಜೀ, ದಾವಣಗೆರೆ ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ತ್ಯಾಗೀಶ್ವರಾನಂದಜೀ, ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ, ಹಲಸೂರು ಮಠದ ಶ್ರೀ ಬೋಧ ಸ್ವರೂಪಾನಂದಜೀ, ಮಾಜಿ ಮೇಯರ್ ಸುನಂದಾ ಪಾಲನೇತ್ರ, ಶ್ರೀ ರಾಮಕೃಷ್ಣ ಸೇವಾ ಸಂಘದ ಅಧ್ಯಕ್ಷ ಎಂ.ಪಾಪೇಗೌಡ ಇದ್ದರು.
ಸಮಾಜಕ್ಕೆ ಮಾರ್ಗದರ್ಶಿಯಾಗಲಿ
ಶಾರದಾಮಾತೆ, ಪರಮಹಂಸ ಹಾಗೂ ವಿವೇಕಾನಂದರು ಧರ್ಮಗಳ ಸಾರ್ವತ್ರಿಕ ಸಾಮರಸ್ಯ ಸಾರಿದ್ದರು. ಮೂವರು ವಿಭಿನ್ನ ಮಾರ್ಗಗಳ ಮೂಲಕ ದೇವರ ಸಾಕ್ಷಾತ್ಕಾರ ಮಾಡಿಕೊಂಡಿದ್ದರು. ಭಕ್ತಿ, ಧ್ಯಾನ, ಜ್ಞಾನ ಅವರ ಮಾರ್ಗಗಳಾಗಿದ್ದವು. ದೇವರೊಂದಿಗೆ ಆತ್ಮೀಯ ಸಂಬಂಧ ಅವರ ಪ್ರತಿಪಾದನೆಯಾಗಿತ್ತು. ಇದು ಸಮಾಜಕ್ಕೆ ಮಾರ್ಗದರ್ಶಿಯಾಗಲಿ.
ಪ್ರೊ. ಕೆ. ಚಿದಾನಂದಗೌಡ
ವಿಶ್ರಾಂತ ಕುಲಪತಿ