ಜಿಲ್ಲೆ

ಜಾನುವಾರು ಗಣತಿಗೆ ಎದುರಾದ ವಿಘ್ನ

Dharwada - Vikram Nadiger

ವಿಕ್ರಮ ನಾಡಿಗೇರ ಧಾರವಾಡ
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ರಾಷ್ಟ್ರೀಯ ಜಾನುವಾರು ಗಣತಿ ಆರಂಭವಾಗಿ ಒಂದು ತಿಂಗಳಾಗುತ್ತಿತ್ತು. ಈ ಕಾರ್ಯಕ್ಕೆ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಸಹ ಅಗತ್ಯ ತಯಾರಿ ಮಾಡಿಕೊಂಡಿತ್ತು. ಆದರೆ ಗಣತಿ ಕಾರ್ಯಕ್ಕೆ ವಿಘ್ನ ಎದುರಾಗಿದೆ.
5 ವರ್ಷಕ್ಕೊಮ್ಮೆ ಜಾನುವಾರು ಗಣತಿ ನಡೆಯಲಿದ್ದು, 2018-19ನೇ ಸಾಲಿನಲ್ಲಿ ಗಣತಿ ನಡೆದಿತ್ತು. ಆದರೆ ಈ ಬಾರಿ ಡಿಜಿಟಲ್​ ಗಣತಿ ನಡೆಸಲು ಕೇಂದ್ರದ ಪಶು ಇಲಾಖೆ ಆ್ಯಪ್​ ಸಹ ಸಿದ್ಧಪಡಿಸಿದೆ. ಅದರಂತೆ ಸೆ. 1ರಿಂದ 4ತಿಂಗಳ ಕಾಲ ಗಣತಿ ಪ್ರಕ್ರಿಯೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಕ್ಕೆ ಮುಂದೂಡಲಾಗಿದೆ.
ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಜಾನುವಾರುಗಳ ಲಿಂಗ, ವಯಸ್ಸು, ಆರೋಗ್ಯದ ಸ್ಥಿತಿ, ತಳಿ, ರೈತ ಕುಟುಂಬಗಳ ವಿವರ ಸೇರಿ ಇತರ ಮಾಹಿತಿಗಳನ್ನು ಮೊಬೈಲ್​ ಆ್ಯಪ್​ನಲ್ಲೇ ದಾಖಲಿಸಲಿದ್ದಾರೆ. ನೆಟ್​ವರ್ಕ್​ ಇಲ್ಲದ ಸ್ಥಗಳಲ್ಲೂ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತಹ "ಟ್ವೆಂಟಿ ಫಸ್ಟ್​ ಲೈವ್​ ಸ್ಟಾಕ್​ ಸೆನ್ಸಸ್​' ಎಂಬ ಆ್ಯಪ್​ ವಿನ್ಯಾಸಗೊಳಿಸಲಾಗಿದೆ. ಕೇಂದ್ರ ಸರ್ಕಾರವೇ ಇದಕ್ಕೆ ಅನುದಾನವನ್ನೂ ಒದಗಿಸಿದೆ.
ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳುವ ಎಲ್ಲ ರಾಜ್ಯಗಳ ಸಿಬ್ಬಂದಿಗೆ ಸೂಕ್ತ ತರಬೇತಿ ಸಹ ನೀಡಲಾಗಿತ್ತು. ಮೊದಲು ಕೇಂದ್ರ ಸರ್ಕಾರದಿಂದ ರಾಜ್ಯ ಮಟ್ಟದಲ್ಲಿ, ನಂತರ ಪ್ರಾದೇಶಿಕ ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ತರಬೇತಿ ನೀಡಲಾಗಿತ್ತು. ಈ ತರಬೇತಿ ಪಡೆಯಲು ಜುಲೈ ಅಂತ್ಯದವರೆಗೆ ಅವಕಾಶ ನೀಡಲಾಗಿತ್ತು. ಅದರಂತೆ ರಾಜ್ಯದ ಸಿಬ್ಬಂದಿ ಸಿದ್ಧರಾಗಿದ್ದರು. ಆದರೆ ಕೆಲ ರಾಜ್ಯದವರ ತರಬೇತಿ ವಿಳಂಬ ಹಾಗೂ ಕೆಲ ತಾಂತ್ರಿಕ ಕಾರಣಗಳಿಂದ ಗಣತಿ ಪ್ರಕ್ರಿಯೆ ಆರಂಭ ವಿಳಂಬವಾಗುತ್ತಿದೆ ಎನ್ನಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಗಣತಿ ಕಾರ್ಯಕ್ಕೆ ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ 79 ಜನ ಗಣತಿದಾರರು, 16 ಮಂದಿ ಮೇಲ್ವಿಚಾರಕರನ್ನು ನಿಯೋಜಿಸಿದೆ. ಜಿಲ್ಲೆಯಲ್ಲಿ ಒಟ್ಟು 4.22 ಲಕ್ಷ ಕುಟುಂಬಗಳಿದ್ದು, ಪ್ರತಿ ದಿನ ಇಂತಿಷ್ಟು ಕುಟುಂಬಗಳ ಸಮೀಕ್ಷೆ ನಡೆಸಿ ಪ್ರಾಣಿಗಳ ಲೆಕ್ಕ ಹಾಗೂ ಪಶುಪಾಲನಾದಾರರ ಮಾಹಿತಿ ಸೇರಿ ಇತರೆ ಮಾಹಿತಿ ಕಲೆ ಹಾಕಲಿದ್ದಾರೆ. ವಿಶೇಷ ತಂತ್ರಾಂಶದಲ್ಲಿ 3 ಅನುಸೂಚಿಗಳನ್ನು ನಿಗದಿಪಡಿಸಿದ್ದು, ಅದರಂತೆಯೇ ವಿವರ ನಮೂದಿಸಲಾಗುತ್ತದೆ.
ಸರ್ಕಾರಗಳು ಜಾನುವಾರುಗಳ ರೋಗ ನಿಯಂತ್ರಿಸಲು, ಗುಣಮಟ್ಟ ಸುಧಾರಣೆ, ವಿಸ್ತರಣೆ, ಆಹಾರ ಪೂರೈಕೆಗೆ ಸಂಬಂಧಿಸಿ ಮುಂದಿನ ಯೋಜನೆ ಸಿದ್ಧಪಡಿಸುವುದು ಇದರ ಮುಖ್ಯ ಉದ್ದೇಶ. ಗೋ ಶಾಲೆಗಳಿದ್ದರೆ ಇದರ ಬಗ್ಗೆ ಸಹ ಮಾಹಿತಿ ಪಡೆಯಲಾಗುತ್ತದೆ. 10ಕ್ಕಿಂತ ಹೆಚ್ಚು ದನಗಳಿದ್ದರೆ, 1,000ಕ್ಕಿಂತ ಹೆಚ್ಚು ಕೋಳಿ ಸಾಕಿದ್ದರೆ, 50ರ ಮೇಲ್ಪಟ್ಟು ಆಡುಗಳನ್ನು ಸಾಕಾಣಿಕೆ ಮಾಡುತ್ತಿದ್ದರೆ ಅವುಗಳನ್ನುಫಾರಂ ಎಂದು ಪರಿಗಣಿಸಲಾಗುತ್ತದೆ ಎನ್ನುತ್ತಾರೆ ಸಿಬ್ಬಂದಿ.
ಜಾನುವಾರು ಗಣತಿ ವೇಳೆ ಪ್ರಮುಖವಾಗಿ ಸಾಕು ಪ್ರಾಣಿಗಳಾದ ಹಸು, ಎತ್ತು, ಎಮ್ಮೆ, ಕುರಿ, ಮೇಕೆ, ಹಂದಿ, ಕುದುರೆ, ಕತ್ತೆ, ಒಂಟೆ, ನಾಯಿ, ಮೊಲ ಮತ್ತು ಕುಕ್ಕುಟಗಳಾದ ಕೋಳಿ, ಬಾತುಕೋಳಿ, ಕೋಳಿಗಳು ಸೇರಿ ಇತರ ಒಟ್ಟು 16 ಜಾತಿಯ ಪ್ರಾಣಿಗಳ ಅಂಕಿ ಸಂಖ್ಯೆ ಸಂಗ್ರಹಿಸಲಾಗುವುದು. ಇದರಲ್ಲಿ ಬೀದಿ ನಾಯಿಗಳು ಹಾಗೂ ಬಿಡಾಡಿ ದನಗಳ ಮಾಹಿತಿಯನ್ನು ಗಣತಿ ಮಾಡಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಸ್ಮಾರ್ಟ್​ ಗಣತಿ : ಹಿಂದಿನ ವರ್ಷಗಳಲ್ಲಿನ ಗಣತಿ ಸಮಯದಲ್ಲಿ ಪುಸ್ತಕದಲ್ಲಿನ ನೂರಾರು ಕಾಲಂಗಳನ್ನು ಸಿಬ್ಬಂದಿ ಭರ್ತಿ ಮಾಡಬೇಕಿತ್ತು. ಆದರೆ ಈ ಬಾರಿ ಕೇಂದ್ರ ಸರ್ಕಾರ ಡಿಜಿಟಲ್​ ಗಣತಿಗೆ ಆದ್ಯತೆ ನೀಡಿದ್ದಕ್ಕೆ ಸ್ಮಾರ್ಟ್​ ಲೋನ್​ ಬಳಸಿ ಗಣತಿ ನಡೆಸಲಾಗುತ್ತದೆ. ಇದಕ್ಕಾಗಿ ಸಿದ್ಧವಾದ ಆ್ಯಪ್​ನಲ್ಲಿ ಚುಟುಕಾಗಿ ಮಾಹಿತಿ ನಮೂದಿಸಬಹುದು. ನೆಟ್​ವರ್ಕ್​ ಇಲ್ಲದಿದ್ದರೂ ಈ ಆ್ಯಪ್​ ನೆಟ್​ವರ್ಕ್​ ಪ್ರದೇಶಕ್ಕೆ ಬರುತ್ತಿದ್ದಂತೆಯೇ ಕೇಂದ್ರ ಸರ್ವರ್​ ಜತೆ ಮಾಹಿತಿ ಹಂಚಿಕೊಳ್ಳುವಂತೆ ವಿನ್ಯಾಸ ಪಡಿಸಿದ್ದು ವಿಶೇಷ.

ಜಾನುವಾರು ಗಣತಿಗೆ ನಮ್ಮ ರಾಜ್ಯ ಸೇರಿ ಜಿಲ್ಲೆಯಲ್ಲೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಕೆಲ ರಾಜ್ಯಗಳಲ್ಲಿ ಅಗತ್ಯ ಸಿದ್ಧತೆ ಆಗದ ಕಾರಣ ಗಣತಿ ಪ್ರಕ್ರಿಯೆ ಮುಂದೂಡಲಾಗಿದೆ. ಮುಂದಿನ ದಿನವನ್ನು ಇನ್ನೂ ಪ್ರಕಟಿಸಿಲ್ಲ. ಯಾವುದೇ ಸಮಯದಲ್ಲಿ ಪ್ರಕ್ರಿಯೆ ಆರಂಭವಾದರೂ ನಮ್ಮ ಸಿಬ್ಬಂದಿ ಸಿದ್ಧರಾಗಿದ್ದಾರೆ.*ರವಿ ಸಾಲಿಗೌಡರ, ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಧಾರವಾಡ