ವಿಜಯವಾಣಿ ಸುದ್ದಿಜಾಲ ಧಾರವಾಡ
ನಾಡಿನ ಹಿರಿಯ ಸಂಸ್ಥೆಯಾದ ವಿದ್ಯಾವರ್ಧಕ ಸಂಘ ಕನ್ನಡದ ಭದ್ರ ನೆಲೆ ಹಾಗೂ ಸೆಲೆಯಾಗಿದೆ. ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಮಂಜಲಿ ಸಾಳುಂಕೆ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಎಸ್.ವಿ. ನಾಯ್ಕ ರಾಣೆ ಕುಟುಂಬದ ದತ್ತಿ ನಿಮಿತ್ತ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಎಸ್.ವಿ.ನಾಯ್ಕ ರಾಣೆ ಪರಿಸರ ಪ್ರೇಮಿ. ಇವರು ಕೊಂಕಣಿ ಲೇಖನಗಳನ್ನು ಪ್ರಕಟಿಸಿದವರು. ಸಮಾಜಮುಖಿ ಸೇವೆಯಲ್ಲಿ ತೊಡಗಿದ್ದು, ಇವರ ಸಮಾಜ ಸೇವೆ ಹಾಗೂ ಸಾಧನೆ ಇತರರಿಗೆ ಮಾದರಿಯಾಗಿದೆ ಎಂದರು.
ಉತ್ತರ ಕನ್ನಡ ಜಿಲ್ಲೆಯ ಸಮಾಜ ಸೇವಕ ಪುರುಷೋತ್ತಮ ಸಾವಂತ ಹಾಗೂ ಹಿರಿಯ ಗ್ರಂಥಪಾಲಕ ಮಹಾಂತೇಶ ರೇವಡಿ ಅವರಿಗೆ ಸನ್ಮಾನಿಸಲಾಯಿತು. ಶಿವಾನಂದ ಭಾವಿಕಟ್ಟಿ, ಸುಪ್ರಿಯಾ ಸಾವಂತ, ಶೃತಿ ನಾಯ್ಕ, ಗಜಾನನ ಕೆ., ಅಶೋಕ ರಾಣೆ, ಸುನೀಲ ರಾಣೆ, ಇತರರು ಇದ್ದರು.
ಶಂಕರ ಹಲಗತ್ತಿ ಸ್ವಾಗತಿಸಿದರು. ಎಸ್.ವಿ. ನಾಯ್ಕ ರಾಣೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಡಾ. ಶೈಲಜಾ ಅಮರಶೆಟ್ಟಿ ವಂದಿಸಿದರು.