ಜಿಲ್ಲೆ

ಏಕರೂಪ ನಾಗರಿಕ ಸಂಹಿತೆ ಮುಸ್ಲಿಂ ಹೆಣ್ಣುಮಕ್ಕಳಿಗೆ ಹೆಚ್ಚು ಅನುಕೂಲ: ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್

ಸದೇಶ್ ಕಾರ್ಮಾಡ್

ಮೈಸೂರು: ದೇಶದ ಹೆಣ್ಣುಮಕ್ಕಳಿಗೆ ಅದರಲ್ಲೂ ಮುಸ್ಲಿಂ ಹೆಣ್ಣುಮಕ್ಕಳಿಗೆ ಧಾರ್ಮಿಕ ಸಂಕೋಲೆಗಳಿಂದ ಬಿಡುಗಡೆ ನೀಡಬಹುದಾದ ಏಕರೂಪ ನಾಗರಿಕ ಸಂಹಿತೆ ಕುರಿತು ನಾವು ಇನ್ನು ಮುಂದಾದರೂ ಗಂಭೀರವಾದ ಚರ್ಚೆಗಳನ್ನು ನಡೆಸುವ ಅವಶ್ಯಕತೆ ಇದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್ ಹೇಳಿದರು.

ವಿದ್ಯಾವರ್ಧಕ ಕಾನೂನು ಕಾಲೇಜು ಶನಿವಾರ ‘ಏಕರೂಪ ನಾಗರಿಕ ಸಂಹಿತೆ -ಸಂವಿಧಾನಾತ್ಮಕ ಆದೇಶ’ ವಿಷಯದ ಕುರಿತು ಏರ್ಪಡಿಸಿದ್ದ ಶಿಕ್ಷಣತಜ್ಞ ಕೆ.ಪುಟ್ಟಸ್ವಾಮಿ ನೆನಪಿನ 4ನೇ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂವಿಧಾನ ನಮಗೆಲ್ಲ ಸಾಕೆನಿಸುವಷ್ಟು ಹಕ್ಕುಗಳನ್ನು ಕೊಟ್ಟಿದೆ. ಹಕ್ಕುಗಳ ಬಗ್ಗೆ ನಾವು ತಲೆಕೆಡಿಸಿಕೊಳ್ಳುವಷ್ಟು ಕರ್ತವ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

140 ಕೋಟಿ ಜನರನ್ನೊಳಗೊಂಡ ಹತ್ತಾರು ಧರ್ಮ, ಮತ, ಜಾತಿಗಳಿರುವ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ ಚರ್ಚೆಗಳು ತಡವಾಗಿಯಾದರೂ ಶುರುವಾಗಿದೆಯಲ್ಲ ಎನ್ನುವ ತೃಪ್ತಿ ಪಡಬೇಕಿದೆ. ಈ ಹಂತದಲ್ಲಿ ಅನೇಕರಲ್ಲಿ ಗೊಂದಲಗಳಿರುವುದು ಸಹಜವೇ. ಏಕರೂಪ ನಾಗರಿಕ ಸಂಹಿತೆಯೊಳಗಿನ ಅಂಶಗಳು ಸಂವಿಧಾನದಲ್ಲೇ ಅಡಕಗೊಂಡಿದೆ. ಈ ನಿಟ್ಟಿನಲ್ಲಿ ಕೇಂದ್ರದ ಕಾನೂನು ಆಯೋಗವು ಹಲವಾರು ಕಾನೂನು ತಜ್ಞರಿಗೆ ತಮ್ಮ ಸಲಹೆಗಳನ್ನು ನೀಡುವಂತೆ ಕೇಳಿಕೊಂಡಿತ್ತು. ಆದರೆ, ಕೆಲವು ತಜ್ಞರು ಯಾವ ಕಾರಣಕ್ಕೂ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲೇಬಾರದು ಎಂದು ಸಲಹೆಗಳನ್ನು ನೀಡಿದ್ದಾರೆ. ಸರಿಯಾದ ಚರ್ಚೆಯನ್ನೇ ಮಾಡದೆ ಈ ರೀತಿ ಸಲಹೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಏಕರೂಪ ನಾಗರಿಕ ಸಂಹಿತೆ ಕುರಿತು ಚರ್ಚಿಸುವಾಗ ಧಾರ್ಮಿಕ, ಸಾಮಾಜಿಕ, ರಾಜಕೀಯ, ಕಾನೂನು ಮತ್ತು ಸಾಂವಿಧಾನಿಕ ಆಯಾಮಗಳಿಂದ ನೋಡಬೇಕಿದೆ. ನಾವು ದೇಶದ ಇತಿಹಾಸವನ್ನು ಕೇವಲ ಒಂದು ಸಾವಿರ ವರ್ಷ ಗಳಿಂದ ನೋಡುತ್ತಾ ಬಂದಿದ್ದೇವೆ. ಭಾರತವನ್ನು 800 ವರ್ಷಗಳು ಮೊಘಲರು ಹಾಗೂ 200 ವರ್ಷಗಳ ಕಾಲ ಬ್ರಿಟಿಷರು ಆಳ್ವಿಕೆ ಮಾಡಿದ್ದಾರೆ. ಇಷ್ಟಕ್ಕೆ ಮಾತ್ರ ನಮ್ಮ ದೇಶದ ಇತಿಹಾಸವನ್ನು ಸೀಮಿತಗೊಳಿಸಿ ನೋಡುವುದು ಸರಿಯೇ ಎಂದು ಪ್ರಶ್ನಿಸಿದರು.

ಪಾಕಿಸ್ತಾನ ಧರ್ಮದ ಆಧಾರದಲ್ಲಿ ಉದಯವಾದರೆ ಭಾರತ ಜಾತ್ಯತೀತ ತತ್ವ ಉಳಿಸಿಕೊಂಡಿತು. ಧಾರ್ಮಿಕ ಸ್ವಾತಂತ್ರೃದ ಹಕ್ಕುಗಳು ಭಾರತ ಸಂವಿಧಾನದ ಶಕ್ತಿ ಎಂದು ಹೇಳಬಹುದು. ಇಷ್ಟರ ನಡುವೆಯೂ ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿ ಮುಸ್ಲಿಂ ಮಹಿಳೆಯರೇ ಹೆಚ್ಚು ಶೋಷಣೆಗೆ ಒಳಗಾಗುತ್ತಿರುವುದನ್ನು ನಾವು ಈಗಲೂ ಕಾಣಬಹುದಾಗಿದೆ. ಈ ಬಿಕ್ಕಟ್ಟಿಗೆ ಏಕರೂಪ ನಾಗರಿಕ ಸಂಹಿತೆ ಒಂದು ಪರಿಹಾರದ ಸಾಧನವಾಗಿ ನಮಗೆ ಕಾಣಬಹುದು ಎಂದರು.

ಸತಿಪದ್ಧತಿ, ದೇವದಾಸಿ ಪದ್ಧತಿಯಂತಹ ಅತ್ಯಂತ ಕ್ರೂರ ಅಮಾನವೀಯ ಆಚರಣೆಗಳು ಸಂಪೂರ್ಣ ನಿರ್ಮೂಲನೆಗೆ ಕಾರಣವಾ ಗಿದ್ದೇ ಸತಿಪದ್ಧತಿ, ದೇವದಾಸಿ ಪದ್ಧತಿ ನಿಷೇಧದಂತಹ ಕಾನೂನುಗಳು. ಈಗ ಮುಸ್ಲಿಂ ಹೆಣ್ಣುಮಕ್ಕಳ ಶೋಷಣೆಯೂ ಏಕರೂಪ ನಾಗರಿಕ ಸಂಹಿತೆಯ ಜಾರಿಯಿಂದ ನಿರ್ಮೂಲನೆ ಆಗಬಹುದು ಎಂಬ ಆಶಾವಾದ ನನ್ನದಾಗಿದೆ ಎಂದು ಹೇಳಿದರು.

ದೇಶದ ಸ್ವಾತಂತ್ರೃ ಚಳವಳಿಯ ಮುಂಚೂಣಿಯಲ್ಲಿದ್ದ ನಮ್ಮ ಬಹುತೇಕ ರಾಷ್ಟ್ರನಾಯಕರು ವಕೀಲರಾಗಿದ್ದರು ಎಂಬುದನ್ನು ನಾವೆಲ್ಲ ಗಮನಿಸಲೇಬೇಕಿದೆ. ಹೀಗಾಗಿ ಸ್ವಾತಂತ್ರೊೃೀತ್ತರ ಭಾರತವನ್ನು ಗಟ್ಟಿಯಾಗಿ ಕಟ್ಟಲು ನಮ್ಮ ರಾಷ್ಟ್ರನಾಯಕರ ಕಾನೂನಿನ ಜ್ಞಾನವು ಅಪಾರ ಪ್ರಮಾಣದಲ್ಲಿ ನೆರವಿಗೆ ಬಂದಿವೆ ಎಂದರು.

ಉಪನ್ಯಾಸದ ನಂತರ ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಪ್ರಶ್ನೆಗಳಿಗೆ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್ ಉತ್ತರಿಸಿದರು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡರು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣವರ್, ಪ್ರಾಂಶುಪಾಲ ಡಾ.ಪಿ.ದೀಪು, ಕಾನೂನು ಅಧ್ಯಯನ ನಿರ್ದೇಶಕ ಪ್ರೊ.ಕೆ.ಬಿ. ವಾಸುದೇವ ಹಾಗೂ ಇತರರು ಇದ್ದರು.