ಜಿಲ್ಲೆ

ಯುವಶಕ್ತಿಯಿಂದಾಗಿ ಭಾರತ ಪ್ರಬಲ

ಗೋಪಾಲಕೃಷ್ಣ ಪಾದೂರ್

ಉಡುಪಿ: ಭಾರತ ಆರ್ಥಿಕ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಜಪಾನ್​ ಮೀರಿಸಿ ಇದೀಗ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕಶಕ್ತಿಯಾಗಿ ಹೊರಹೊಮ್ಮಿದೆ. ಡಿಜಿಟಲ್​ ಆರ್ಥಿಕತೆ ಬೆಳವಣಿಗೆ, ಬೃಹತ್​ ಮೂಲಸೌಕರ್ಯ ಯೋಜನೆಗಳು ಮತ್ತು ಯುವಜನಸಂಖ್ಯೆ ಆರ್ಥಿಕಾಭಿವೃದ್ಧಿಯ ಇಂಧನಗಳಾಗಿವೆ ಎಂದು ಉದ್ಯಮಿ ಅಜಯ್​ ಪುರುಷೋತ್ತಮ ಶೆಟ್ಟಿ ಹೇಳಿದರು.

ಅಜ್ಜರಕಾಡು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ವಿಜಯವಾಣಿ ವಿದ್ಯಾರ್ಥಿಮಿತ್ರ ಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು. ಜಪಾನ್​ ಮೂರು ದಶಕದಿಂದ ಸ್ಥಿರತೆಯ ಸಂಕಷ್ಟಗಳನ್ನು ಎದುರಿಸುತ್ತಿದ್ದು, ವೃದ್ಧಜನಸಂಖ್ಯೆ ಮತ್ತು ಕುಂಠಿತ ಗ್ರಾಹಕ ಖರ್ಚು ಆ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಭಾರತ ಈಗ ಅಮೇರಿಕ, ಚೀನಾ ಮತ್ತು ಜರ್ಮನಿಯ ನಂತರದ ಸ್ಥಾನದಲ್ಲಿದೆ. ಜರ್ಮನಿ ಮತ್ತು ಭಾರತಕ್ಕೆ ಹೆಚ್ಚಿನ ಅಂತರವಿಲ್ಲ. ಶ್ರೀದಲ್ಲೇ ಜರ್ಮನಿಯನ್ನು ಹಿಂದಿಕ್ಕಿ 3ನೇ ಆರ್ಥಿಕತೆಯಾಗುವುದರಲ್ಲಿ ಸಂಶಯವಿಲ್ಲ ಎಂದರು.

ವಿದ್ಯಾರ್ಥಿಗಳು ಉತ್ತಮ ಅವಕಾಶಗಳನ್ನು ಪಡೆದುಕೊಳ್ಳಲು ಸಿದ್ಧರಾಗಬೇಕು. ಈ ನಿಟ್ಟಿನಲ್ಲಿ ವಿಜಯವಾಣಿ ವಿದ್ಯಾರ್ಥಿಮಿತ್ರ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ಮಾರ್ಗದರ್ಶನ ನೀಡಲಿದೆೆ ಎಂದರು. ಮುಖ್ಯ ಶಿಕ್ಷಕಿ ಇಂದಿರಾ ಬಿ. ಉಪಸ್ಥಿತರಿದ್ದರು. ಹಿರಿಯ ವರದಿಗಾರ ಗೋಪಾಲಕೃಷ್ಣ ಪಾದೂರು ನಿರೂಪಿಸಿ, ಶಿಕ್ಷಕಿ ಜ್ಯೋತಿ ವಂದಿಸಿದರು. ಪ್ರಸರಣ ವಿಭಾಗದ ನವೀನ್​ ನಾಯರಿ ಸಹಕರಿಸಿದರು.