ಜಿಲ್ಲೆ

ಮಕ್ಕಳಿಗಾಗಿ ವಿದ್ಯಾಗಮ ಯೋಜನೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಕರೊನಾ ಸಂದರ್ಭದಲ್ಲೂ ಮಕ್ಕಳ ಕಲಿಕೆಗೆ ತೊಡಕಾಗಬಾರದೆಂಬ ಕಾರಣಕ್ಕೆ ತಂತ್ರಜ್ಞಾನ ಆಧಾರಿತ ಶಿಕ್ಷಣ ಕಲಿಸುವ ‘ವಿದ್ಯಾಗಮ’ ನಿರಂತರ ಕಲಿಕಾ ಯೋಜನೆ ಜಾರಿಗೆ ತರಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.

ಎಲ್ಲ ಮಕ್ಕಳಿಗೂ ತಂತ್ರಜ್ಞಾನ ಆಧಾರಿತ ಶಿಕ್ಷಣ ದೊರೆಯುವಂತೆ ಮಾಡುವುದು ಮತ್ತು ಶಿಕ್ಷಕರು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವ ಮೂಲಕ ಮಕ್ಕಳ ಮನೋಸ್ಥೈರ್ಯ ಹೆಚ್ಚಿಸುವುದು ವಿದ್ಯಾಗಮ ಯೋಜನೆಯ ಉದ್ದೇಶ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್​ಕುಮಾರ್ ಹೇಳಿದ್ದಾರೆ.

ರಾಜ್ಯದಲ್ಲಿ ಗ್ರಾಮ, ನಗರ, ಪಟ್ಟಣ, ಗುಡ್ಡಗಾಡು, ಹಳ್ಳಿಗಾಡು ಪ್ರದೇಶ, ಬೆಟ್ಟ, ಅರಣ್ಯದಂಚಿನ ಗ್ರಾಮಗಳ ಮಕ್ಕಳಿದ್ದಾರೆ. ಕೆಲ ಮಕ್ಕಳಿಗೆ ಟಿವಿ, ಫೋನ್ ಸೌಲಭ್ಯವೂ ಇರಲ್ಲ. ಆದ್ದರಿಂದ ಎಲ್ಲ ಮಕ್ಕಳ ಕಲಿಕೆ ನಿರಂತರ ಆಗಿರುವಂತೆ ನೋಡಿಕೊಳ್ಳುವುದಕ್ಕಾಗಿ ಎಂ.ಕೆ. ಶ್ರೀಧರ್ ನೇತೃತ್ವದ ಸಮಿತಿ ವರದಿ ಆಧಾರದಲ್ಲಿ ವಿದ್ಯಾಗಮ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸ್ವಯಂ ಸೇವಕರ ನೇಮಕ: ಪ್ರತಿ ನೆರೆಹೊರೆ ಗುಂಪಿಗೆ ಆ ಪ್ರದೇಶದಲ್ಲಿ ವಾಸಿಸುವ ವಿದ್ಯಾವಂತ ಯುವಕ/ಯುವತಿಯರನ್ನು ಗುರುತಿಸಿ ಸ್ವಯಂಸೇವಕರನ್ನಾಗಿ ನೇಮಿಸಲಾಗುವುದು. ಸದರಿ ಸ್ವಯಂಸೇವಕರು ಮಾರ್ಗದರ್ಶಿ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ನೆರೆಹೊರೆ ಗುಂಪಿನ ಮಕ್ಕಳಿಗೆ ಪಾಠ ಪ್ರವಚನ ಕೈಗೊಳ್ಳಲಿದ್ದು, ತಮ್ಮ ವ್ಯಾಪ್ತಿಯಲ್ಲಿರುವ ಸ್ವಯಂಸೇವಾ ಸಂಸ್ಥೆಗಳ ಸಹಕಾರವನ್ನೂ ಸಹಾಯ ಪಡೆಯಲಾಗುತ್ತದೆ.

ಸಂವೇದ ಕಾರ್ಯಕ್ರಮ: ಶೇ.90ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳ ಮನೆಗಳಲ್ಲಿ ಟಿ.ವಿ. ಇರುವುದರಿಂದ, ‘ಸಂವೇದ’ ಟಿ.ವಿ. ಆಧಾರಿತ ಕಲಿಕಾ ಕಾರ್ಯಕ್ರಮವನ್ನು ‘ವಿದ್ಯಾಗಮ’ ಕಾರ್ಯಕ್ರಮದ ಅಂಗವಾಗಿ ರೂಪಿಸಲಾಗಿದೆ. ಯು-ಟ್ಯೂಬ್ ತರಗತಿಗಳು 1ರಿಂದ 10ನೇ ತರಗತಿಯವರೆಗೆ ಆಂಗ್ಲ ಮತ್ತು ಕನ್ನಡ ಮಾಧ್ಯಮದಲ್ಲಿ ಪಾಠಗಳನ್ನು ಪರಿಣತ ಶಿಕ್ಷಕರ ಬೋಧನೆಯ ವಿಡಿಯೋ ತಯಾರಿಸಿ ಯು-ಟ್ಯೂಬ್ ಚಾನೆಲ್ ‘ಮಕ್ಕಳ ವಾಣಿ’ಯಲ್ಲೂ ಅಪ್​ಲೋಡ್ ಮಾಡಲಾಗುವುದು.

ಪ್ರಮುಖಾಂಶ

  • ಪ್ರತಿ ಶಾಲೆಯ 20ರಿಂದ 25 ಮಕ್ಕಳಿಗೆ ಒಬ್ಬ ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಿ ಕಾಲ್ಪನಿಕ ಕಲಿಕಾ ತರಗತಿ.
  • ತರಗತಿ ವಿಧ 1- ಯಾವುದೇ ತಂತ್ರಜ್ಞಾನ ಆಧಾರಿತ ಸಾಧನಗಳು ಇಲ್ಲದ (ಮೊಬೈಲ್ ರಹಿತ) ಮಕ್ಕಳ ತರಗತಿ
  • ತರಗತಿ ವಿಧ 2- ಇಂಟರ್​ನೆಟ್ ರಹಿತ ಮೊಬೈಲ್ ಫೋನ್ ಹೊಂದಿರುವ ತರಗತಿ
  • ತರಗತಿ ವಿಧ 3-ಇಂಟರ್ನೆಟ್ ಸಹಿತ ಕಂಪ್ಯೂಟರ್/ಟ್ಯಾಬ್/ ಸ್ಮಾರ್ಟ್​ಫೋನ್ ಹೊಂದಿರುವ ತರಗತಿ
  • 1 ರಿಂದ 5ನೇ ತರಗತಿ, 6 ರಿಂದ 8ನೇ ತರಗತಿ ಹಾಗೂ 8 ರಿಂದ 10ನೇ ತರಗತಿ ಮಕ್ಕಳನ್ನು ವಾಸ ಸ್ಥಳದ ಭೌಗೋಳಿಕ ಪ್ರದೇಶವನ್ನು ಆಧರಿಸಿ ಹಂಚಿಕೆ.
  • ಮೂರೂ ತರಗತಿಯ ಮಾರ್ಗದರ್ಶಿ ಶಿಕ್ಷಕರು ‘ನೆರೆಹೊರೆ’ ಗುಂಪುವಾರು ಮಕ್ಕಳನ್ನು ಕನಿಷ್ಠ ವಾರಕ್ಕೆ ಒಂದು ಬಾರಿಯಾದರೂ ಭೇಟಿ ಮಾಡಿ ಮಕ್ಕಳ ಕಲಿಕಾ ಪ್ರಗತಿ ಹಾಗೂ ಪಠ್ಯೇತರ ಚಟುವಟಿಕೆಗಳ ಬಗ್ಗೆ ರ್ಚಚಿಸುತ್ತಾರೆ.
  • ಪೂರೈಸಿರುವ ಕಲಿಕಾ ಸಾಮಗ್ರಿಗಳನ್ನು ಬಳಸಿಕೊಂಡು ಮನೆಯಲ್ಲೇ ಸ್ವ-ಕಲಿಕೆ ಮುಂದುವರಿಸಲು ಮಕ್ಕಳಿಗೆ ಮತ್ತು ಪಾಲಕರಿಗೆ ವಿವರವಾದ ಮಾರ್ಗದರ್ಶನ ನೀಡಲಾಗುತ್ತದೆ.
  • ಲಭ್ಯತೆಯ ಆಧಾರದಲ್ಲಿ ಮಾರ್ಗದರ್ಶಿ ಶಿಕ್ಷಕರು ಜೂಮ್​ಸಿಸ್ಕೋ ವೆಬೆಕ್ಸ್/ಗೂಗಲ್ ಕ್ಲಾಸ್ ರೂಮ್ ಮುಂತಾದ ಇಂಟರ್ನೆಟ್ ಅಪ್ಲಿಕೇಷನ್ (ಆಪ್) ಬಳಸಿ ವಿಡಿಯೋ ಕಾನ್ಪರೆನ್ಸ್ ಬೋಧನೆ ಮಾಡುತ್ತಾರೆ.