ಕೋಲಾರ: ಮಕ್ಕಳನ್ನು ಕಲಿಕೆಯ ಕಡೆಗೆ ಸೆಳೆಯಲು ಜಾರಿಗೆ ತಂದಿರುವ ವಿದ್ಯಾಗಮ ಯೋಜನೆಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲು 11646 ಕಲಿಕಾ ಕೋಣೆ ತೆರೆಯಲಾಗಿದೆ ಎಂದು ಶಿಕ್ಷಣ ಇಲಾಖೆ ನಿರ್ದೇಶಕ(ಗುಣಮಟ್ಟ) ಎಚ್.ಎನ್.ಗೋಪಾಲಕೃಷ್ಣ ಹೇಳಿದರು.
ವಿದ್ಯಾಗಮ ಯೋಜನೆಯ ಪ್ರಗತಿ ಪರಿಶೀಲನೆಗಾಗಿ ಡಿಡಿಪಿಐ ಕಚೇರಿಗೆ ಶುಕ್ರವಾರ ಭೇಟಿ ನೀಡಿದ್ದ ಅವರು ಸಭೆಯ ಬಳಿಕ ವಿಜಯವಾಣಿಯೊಂದಿಗೆ ಮಾತನಾಡಿ, ಜಿಲ್ಲೆಯ ಶಿಕ್ಷಕರು ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ಇದು ರಾಜ್ಯಕ್ಕೆ ಮಾದರಿಯಾಗಲಿರುವುದರಿಂದ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಗಳ ಗಮನಕ್ಕೆ ತರುವೆ ಎಂದರು.
ಜಿಲ್ಲೆಯ ಯಾವ ಶಾಲೆಯಲ್ಲಿ ಮೂಲ ಸೌಕರ್ಯ ಇಲ್ಲವೋ ಅಂತಹ ಶಾಲೆ ಗುರುತಿಸಲು ಶಿಕ್ಷಕರು ಈಗಾಗಲೆ ಸಮೀಕ್ಷೆ ನಡೆಸಿದ್ದಾರೆ, ಜತೆಗೆ ಟಿವಿ ಇಲ್ಲದ ಹಾಗೂ ಟಿವಿ, ಮೊಬೈಲ್, ಇಂಟರ್ ನೆಟ್ ಇನ್ನಿತರ ಅಗತ್ಯ ಸವಲತ್ತು ಇರುವ ಶಾಲೆಗಳನ್ನು ಪತ್ತೆ ಮಾಡಿ ಮಕ್ಕಳನ್ನು ಅಲ್ಲಿಗೆ ಸೆಳೆದು ಪಾಠ-ಪ್ರವಚನ ನೀಡಲಾಗುವುದು ಎಂದರು.
ವಿದ್ಯಾಗಮ ವಿನೂತನ ಯೋಜನೆಯಾಗಿದ್ದು, ವಿದ್ಯಾರ್ಥಿ ಕೇಂದ್ರೀಕೃತವಾಗಿಸಿ ಪಾಲಕರು, ಎಸ್‌ಡಿಎಂಸಿ ಹಾಗೂ ಸ್ವಯಂಸೇವಕರ ಸಹಕಾರದಿಂದ ಅನುಷ್ಠಾನಗೊಳಿಸಲಾಗುತ್ತದೆ. ತಾಲೂಕುವಾರು ಮ್ಯಾಪಿಂಗ್ ಆಗದಿರುವ ಮಕ್ಕಳನ್ನು ಗುರುತಿಸಿ ಅಂತಹವರಿಗೆ ಕಲಿಕಾಸಕ್ತಿ ಮೂಡಿಸಲು ಮೊಬೈಲ್ ಸ್ವಾಡ್ ರೀತಿಯಲ್ಲಿ ಕಾರ್ಯಾಚರಣೆ ನಡೆಸುವುದಲ್ಲದೆ, ವಿಶೇಷ ಮೊಬೈಲ್ ಆ್ಯಪ್ ಬಳಸಿಕೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಯಾವುದೇ ಸೌಲಭ್ಯವಿರದ ವಿದ್ಯಾರ್ಥಿಗಳು ಶೇ.20 ಇದ್ದಾರೆ. 15 ದಿನಕ್ಕೊಮ್ಮೆ ಈ ವಿದ್ಯಾರ್ಥಿಗಳ ಪ್ರಗತಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ಚಂದನ ವಾಹಿನಿಯಲ್ಲಿ ಬರುವ ಕಾರ್ಯಕ್ರಮ ವೀಕ್ಷಿಸಲು ಗ್ರಾಪಂ ಹಂತದಲ್ಲಿ ಟಿವಿ ವ್ಯವಸ್ಥೆ ಮಾಡಿ, ಪ್ರತಿ ವಿದ್ಯಾರ್ಥಿ ವೀಕ್ಷಣೆ ಮಾಡಿದ ಬಗ್ಗೆ ಪರಿಶೀಲನೆ ನಡೆಸಿ ಪ್ರಶ್ನೋತ್ತರ ನೀಡಿ ಕಲಿಕೆಯಲ್ಲಿ ಆಸಕ್ತಿ ಮೂಡಿಸಬೇಕು ಎಂದು ಶಿಕ್ಷಕರಿಗೆ ಸೂಚಿಸಿದರು.
ಡಿಡಿಪಿಐ ಕೆ.ಎಂ.ಜಯರಾಮರೆಡ್ಡಿ ಜಿಲ್ಲೆಯಲ್ಲಿ ವಿದ್ಯಾಗಮ ಯೋಜನೆ ಅನುಷ್ಠಾನದಲ್ಲಿನ ಪ್ರಗತಿ ವಿವರಿಸಿ ಮತ್ತಷ್ಟು ಪರಿಣಾಮಕಾರಿಯಾಗಿಸಲು ಕ್ರಮ ಕೈಗೊಳ್ಳಲಾಗಿದೆ, ಶಿಕ್ಷಕರು ವಿದ್ಯಾಗಮದಡಿ ಮಕ್ಕಳನ್ನು ತಲುಪಿದ ಕುರಿತ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಬಿಇಒ ಕೆ.ಎಸ್.ನಾಗರಾಜಗೌಡ, ಡಿವೈಪಿಸಿ ಮೋಹನ್ ಬಾಬು, ವಿಷಯ ಪರೀಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ, ವೆಂಕಟೇಶಪ್ಪ, ಎವೈಪಿಸಿ ಸಿದ್ದೇಶ್, ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಮಂಜುನಾಥ್ ಮತ್ತಿತರರಿದ್ದರು.
ಕಲಿಕಾ ಕೋಣೆಗಳಿಗೆ ಭೇಟಿ: ಪ್ರಗತಿ ಪರಿಶೀಲನೆ ಬಳಿಕ ನಿರ್ದೇಶಕರು ನಗರದ ಜೂನಿಯರ್ ಕಾಲೇಜು ಬಯಲು ರಂಗಮಂದಿರ ಇನ್ನಿತರೆಡೆ ವಿದ್ಯಾಗಮದಡಿ ನಡೆಸುತ್ತಿರುವ ಕಲಿಕಾ ಕೋಣೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹಿಸಿದರಲ್ಲದೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾಠಗಳ ಕುರಿತು ಮಾರ್ಗದರ್ಶಿ ಶಿಕ್ಷಕರು ಮಕ್ಕಳಿಗೆ ಸಂದೇಹಗಳಿದ್ದಲ್ಲಿ ವಿಷಯ ಶಿಕ್ಷಕರ ಮೂಲಕ ಅರ್ಥ ಮಾಡಿಸಬೇಕು ಎಂದರು.