ಉಡುಪಿ: ವಿದ್ಯಾರ್ಥಿಗಳು ವಿದೇಶಿ ಫಾಸ್ಟ್‌ಫುಡ್ ಸಂಸ್ಕೃತಿಯತ್ತ ಆಕರ್ಷಿತರಾಗದೆ ಸಾತ್ವಿಕ ಆಹಾರ ಪದ್ಧತಿ ಅಳವಡಿಸಿಕೊಂಡರೆ ಅನೇಕ ರೋಗಗಳಿಂದ ದೂರವಿರಲು ಸಾಧ್ಯವಿದೆ. ಇಲ್ಲದಿದ್ದರೆ ಸಂಪಾದನೆಯ ಕಾಲದಲ್ಲಿ ವೈದ್ಯಕೀಯ ವೆಚ್ಚಕ್ಕಾಗಿ ಹಣ ವಿನಿಯೋಗಿಸುವ ಅನಿವಾರ್ಯತೆ ಎದುರಾಗುತ್ತದೆ ಎಂದು ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್ ಹೇಳಿದರು.
ಯಕ್ಷಗಾನ ಕಲಾರಂಗ ವತಿಯಿಂದ ಪ್ರಥಮ ಪಿಯು ಮುಗಿಸಿದ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಐದು ದಿನಗಳ ಸನಿವಾಸ ಶಿಬಿರ ಸಮಾರೋಪದಲ್ಲಿ ಬುಧವಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೈಹಿಕ ಆರೋಗ್ಯ ಹಾಗೂ ಪರಿಸರ ಸ್ವಚ್ಛತೆ ಕಡೆಗೂ ಗಮನ ಹರಿಸಬೇಕು. ಇದರಿಂದ ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ. ವಿದ್ಯಾರ್ಥಿಗಳು ಋಣಾತ್ಮಕ ವಿಷಯಗಳಿಂದ ದೂರವಿದ್ದು, ಪಠ್ಯೇತರ ಚಟುವಟಿಕೆಯತ್ತಲೂ ಗಮನ ಹರಿಸಬೇಕು ಎಂದರು.
ಮೈ ಲೈಫ್ ಸಂಸ್ಥೆಯ ಪ್ರವೀಣ್ ಗುಡಿ, ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ಸತ್ಯನಾರಾಯಣ ಪುರಾಣಿಕ್, ನಿವೃತ್ತ ಪ್ರಾಂಶುಪಾಲೆ ತಾರಾದೇವಿ, ಕಲಾರಂಗ ಅಧ್ಯಕ್ಷ ಗಣೇಶ್ ರಾವ್, ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಕಾರ್ಯದರ್ಶಿ ಮುರಳೀ ಕಡೆಕಾರ್, ಗಂಗಾಧರ ರಾವ್ ಉಪಸ್ಥಿತರಿದ್ದರು.
ಪರಿಶ್ರಮವಿದ್ದರೆ ಉನ್ನತ ಸ್ಥಾನ: ಬೆಂಗಳೂರು ಯಕ್ಷದೇಗುಲ ಅಧ್ಯಕ್ಷ ಬಾಲಕೃಷ್ಣ ಭಟ್ ಮಾತನಾಡಿ, ಓದು ಕೇವಲ ಉದ್ಯೋಗಕ್ಕೆ ಸೀಮಿತವಾಗದೆ ಜಾನಾರ್ಜನೆಗೂ ಹೆಚ್ಚಿನ ಒತ್ತು ನೀಡಬೇಕು. ಜೀವನ ಉತ್ತಮ ರೀತಿಯಲ್ಲಿ ರೂಪುಗೊಳ್ಳಲು ಜ್ಞಾನ ಸಂಪಾದನೆ ಅಗತ್ಯ. ಪರಿಶ್ರಮದಿಂದ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯ ಎಂದು ಹೇಳಿದರು.