ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳಿಗೆ ಎಲ್ಲ ಸೌಲಭ್ಯಗಳು ಇದ್ದರೂ ಕಲಿಕಾ ಗುಣಮಟ್ಟ ಕಡಿಮೆ ಆಗುತ್ತಿದೆ. 625 ಅಂಕ ಪಡೆದರೂ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ಕುಸಿಯುತ್ತಿದೆ. ಮಕ್ಕಳ ಶ್ರೇಯೋಭಿದ್ಧಿಯಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಎಂದು ಅಪರ ಆಯುಕ್ತರ ಕಚೇರಿಯ ಉಪ ನಿರ್ದೇಶಕ ಗಿರೀಶ ಪದಕಿ ಹೇಳಿದರು.
ನಗರದ ವನಿತಾ ಸೇವಾ ಸಮಾಜದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿದ್ಯಾಭಾರತಿ ಸಹಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾತೃ ಭಾಷೆಯಲ್ಲಿ ಕಲಿತರೂ ಸಾಧನೆ ಮಾಡಬಹುದು. ಈ ದಿಶೆಯಲ್ಲಿ ಶಿಶು ಶಿಕ್ಷಣವನ್ನು ಉತ್ತಮವಾಗಿ ನೀಡಬೇಕು. ಈ ಹಂತದಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು. ಶಿಕ್ಷಕರ ಮನೋಭಾವನೆ ಬದಲಾವಣೆಯಾಗಬೇಕು. ಅಂದಾಗ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ ಹೊಂದಲು ಸಾಧ ಎಂದರು.
ವನಿತಾ ಸೇವಾ ಸಮಾಜದ ಅಧ್ಯಕ್ಷ ಟಿ.ಎಲ್. ಪಾಟೀಲ ಮಾತನಾಡಿ, ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಅವಶ್ಯವಿದೆ. ಶಾಲೆಯಲ್ಲಿ ಭಾರತೀಯ ಸಂಸ್ಕೃತಿ ಬೆಳೆಸುವಲ್ಲಿ ವಿದ್ಯಾಭಾರತಿ ಕಾರ್ಯ ಮಾಡುತ್ತಿರುವುದು ಪ್ರಶಂಸನೀಯ ಎಂದರು.
ವಿದ್ಯಾಭಾರತಿ ಪ್ರಾಂತ ಪ್ರಮುಖ ನಾಗೆಂದ್ರ ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಭಾರತಿ ಜಿಲ್ಲಾಧ್ಯಕ್ಷ ಶಾಂತಣ್ಣ ಕಡಿವಾಳ, ಸುಹಾಸ ಆನೆಗುಂದಿ ಹಾಗೂ 150ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ವಿದ್ಯಾಭಾರತಿ ಜಿಲ್ಲಾ ಕಾರ್ಯದರ್ಶಿ ಅಶೋಕ ನಾಯಕ ಸ್ವಾಗತಿಸಿದರು. ಪ್ರತಿಭಾ ಪಾಟೀಲ ನಿರೂಪಿಸಿದರು. ಶ್ವೇತಾ ಯಜುರ್ವೇದಿ ವಂದಿಸಿದರು.