ಮೈಸೂರು: ಚೆನ್ನೈನ ವಿದ್ವಾನ್ ಟಿ.ಎಂ.ಕೃಷ್ಣ ಅವರ ಶಾಸ್ತ್ರೀಯ ಸಂಗೀತದ ಗಾಯನ ಮೋಡಿ ಗಾನಾಮೃತ ಉಣಬಡಿಸಿ ಸಭಿಕರ ಮನಗೆದ್ದಿತು.
ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಅರಮನೆ ವೇದಿಕೆಯಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗೆ ಸಂಗೀತಾಸಕ್ತರು ತಲೆದೂಗಿದರು. ಅವರ ಕಂಠಸಿರಿ ಸಭಿಕರನ್ನು ಮೂಕವಿಸ್ಮಿತಗೊಳಿಸಿತು.
ವಿವಿಧ ಅಪರೂಪದ ರಾಗಗಳಲ್ಲಿ ಕ್ಷಿಪ್ರ ಸ್ವರಗಳನ್ನು ಹಾಡುವ ಮೂಲಕ ಕೃಷ್ಣ ಅವರು ಕೇಳಿಗರನ್ನು ತಮ್ಮತ್ತ ಸೆಳೆದುಕೊಂಡರು. ಸಂಗೀತ ಕಛೇರಿಯನ್ನು ಪ್ರಸ್ತುತಪಡಿಸಿದ ವಿಧಾನದಲ್ಲಿರುವ ನಾವೀನ್ಯತೆಯಿಂದಾಗಿ ಸಂಗೀತ ಪ್ರಿಯರು ತದೇಕಚಿತ್ತದಿಂದ ಆಲಿಸುವಂತೆ ಮಾಡಿ ಸೈ ಎನಿಸಿಕೊಂಡರು.
ರಾತ್ರಿ 8 ಗಂಟೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಒಂದೂವರೆ ತಾಸು ತಡವಾಯಿತು. ಇದರಿಂದ ನಿರಾಸೆಗೊಂಡ ಪ್ರೇಕ್ಷಕರು ಇವರ ಗಾಯನಕ್ಕಾಗಿ ಕಾಯ್ದು ಕುಳಿತಿದ್ದರು. 9.40 ಗಂಟೆಗೆ ವೇದಿಕೆ ಏರಿದರೂ ಇವರ ಗಾಯನ ಕೇಳುಗರಿಗೆ ಮೋಸ ಮಾಡಲಿಲ್ಲ. ಸಂಗೀತಾಸಕ್ತರನ್ನು ರಾಗಲೋಕದಲ್ಲಿ ಅಲೆ ಅಲೆಯಾಗಿ ತೇಲುವಂತೆ ಮಾಡಿ ಮಂತ್ರಮುಗ್ಧರನ್ನಾಗಿಸಿತು.
ಮೈಸೂರಿನ ಉದಯೋನ್ಮುಖ ಸ್ಯಾಕ್ಸೋಫೋನ್ ವಾದಕ ವಿದ್ವಾನ್ ಹರೀಶ್ ಪಾಂಡವ್ ತಂಡದ ಸದಸ್ಯರು ಸ್ಯಾಕ್ಸೋಫೋನ್ ಫ್ಯೂಷನ್ ಪ್ರಸ್ತುತಪಡಿಸಿದರು.
ವಿದ್ಯಾ ರವಿಶಂಕರ್ ತಂಡದ ಶ್ರೀ ರಾಜೇಶ್ವರಿ ನೃತ್ಯ ರೂಪಕ ಆಕರ್ಷಕವಾಗಿ ಮೂಡಿ ಬಂತು. ಅಂಧ ಕಲಾವಿದೆ ವಿ.ಎನ್.ಮಂಜುಳಾ ನಾಗರತ್ನಾ ಅವರು ಜಯಚಾಮರಾಜೇಂದ್ರ ಒಡೆಯರ್ ಅವರ ಕಮಲಾಂಬಿಕೆ ಗೀತೆಯನ್ನು ಪ್ರಸ್ತುತಪಡಿಸಿ ಸಭಿಕರನ್ನು ಆಕರ್ಷಿಸಿದರು. ಜತೆಗೆ, ಚಾಮುಂಡೇಶ್ವರಿ ಸೇರಿದಂತೆ ಇನ್ನಿತರ ಗೀತೆಗಳನ್ನು ಹಾಡಿದರು.