ಜಿಲ್ಲೆ

ಸರ್ಕಾರಿ ಶಾಲೆ ಅಭಿವೃದ್ಧಿಗೆ ಶ್ರಮಿಸಿ

ಎ. ಆರ್. ರಘುರಾಮ

ಬೇಲೂರು : ಆರೋಗ್ಯ ಸೇವೆ ಹಾಗೂ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡುವಲ್ಲಿ ಸರ್ಕಾರಗಳು ಮುಂದಾಗಬೇಕು ಎಂದು ಸಾಲು ಮರದ ತಿಮ್ಮಕ್ಕರವರ ಪುತ್ರ ಡಾ.ಬಳ್ಳೂರು ಉಮೇಶ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜಯವಾಣಿ ಪತ್ರಿಕೆಯ ‘ವಿದ್ಯಾರ್ಥಿ ಮಿತ್ರ’ ಸಂಚಿಕೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣವಿದೆ. ಆದರೆ ಸಾಕಷ್ಟು ಜನರು ಇಂದು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ಸೂಟು- ಬೂಟು ಹಾಕಿಕೊಳ್ಳುವ ಪದ್ಧತಿಯಲ್ಲಿ ಕಲಿಕೆ ಸಾಗಿದೆ. ಅರ್ಹ, ಪ್ರತಿಭಾನ್ವಿತ ಶಿಕ್ಷಕರಿಂದ ಬೋಧನೆ ದೊರೆಯುತ್ತಿದ್ದರೆ ಅದು ಸರ್ಕಾರಿ ಶಾಲೆಯಿಂದ ಮಾತ್ರ. ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಮೌಲ್ಯವಿಲ್ಲದ ಶಿಕ್ಷಣ ಮಕ್ಕಳ ಉಜ್ವಲ ಬದುಕಿಗೆ ತೊಡಕುಂಟಾಗಲಿದೆ. ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರ, ತಂದೆ, ತಾಯಿ, ಗುರು ಹಿರಿಯರಿಗೆ ಗೌರವ ನೀಡುವಂಥ ನೀತಿ ಬೋಧನೆ ಅಗತ್ಯವಿದೆ ಎಂದು ಉಮೇಶ್ ಹೇಳಿದರು.
ಮೂಲ ಸೌಕರ್ಯ ಒದಗಿಸಿ: ಸರ್ಕಾರಿ ಶಾಲೆಗಳ ಉಳಿಸಿ ಎಂದು ಹೇಳಿಕೆ ನೀಡಿದರೆ ಸಾಲದು. ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಬೇಕು. ವಿದ್ಯಾರ್ಥಿಗಳು ಜ್ಞಾನ ವೃದ್ಧಿಗಾಗಿ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮೊಬೈಲ್ ಫೋನ್ ಮಿತಿ ಮೀರಿದ ಬಳಕೆ ಬಗ್ಗೆ ಪಾಳಕರು ಎಚ್ಚರ ವಹಿಸಬೇಕು ಎಂದು ಉಮೇಶ ಸಲಹೆ ನೀಡಿದರು.
ಈ ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಕೊಡುವುದಾಗಿ ಅವರು ಭರವಸೆ ನೀಡಿದರು. ಪುರಸಭೆ ಸದಸ್ಯ ಜಮಾಲುದ್ದೀನ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಓದಿದವರು ಇಂದು ಐಎಎಸ್, ಕೆಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ, ವಿಜ್ಞಾನಿಗಳಾಗಿದ್ದಾರೆ. ವಿದ್ಯಾರ್ಥಿಗಳು ದುಶ್ಚಟದಿಂದ ದೂರವಿದ್ದರೆ ಮೌಲ್ಯಾಧಾರಿತ ಶಿಕ್ಷಣ, ಸಂಸ್ಕಾರಯುತ ಬದುಕು ಸಾಗಿಸಲು ಸಾಧ್ಯವಿದೆ. ಉತ್ತಮರ ಸ್ನೇಹ, ಉತ್ತಮ ನಡೆ, ನುಡಿ ಬದುಕಿಗೆ ಪೂರಕವಾಗಿರುತ್ತದೆ ಎಂದರು. ಸರ್ಕಾರಿ ಪ್ರೌಢಶಾಲೆ ಉಪ ಪ್ರಾಂಶುಪಾಲ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ವರ್ಷ ಹತ್ತನೆ ತರಗತಿಯಲ್ಲಿ ಶೇ.91.65 ಫಲಿತಾಂಶ ಬಂದಿದೆ. ಈ ವರ್ಷ ಶೇ.100 ಫಲಿತಾಂಶ ಸಾಧಿಸುವ ಉದ್ದೇಶವಿದೆ ಎಂದರು.
ಶಿಕ್ಷಕರಾದ ಟಿ.ಡಿ.ತಮ್ಮಣ್ಣಗೌಡ, ಹೇಮಂತಕುಮಾರ್, ಮನೋಹರ್, ಶಾಹಿದ್, ವರ್ತಕ ಇಮ್ತಿಯಾಜ್ ಇದ್ದರು.