ಕುಮಟಾ: ಕಠಿಣ ಪರಿಶ್ರಮ, ಪಾಲಕರ ಸಹಕಾರ ಹಾಗೂ ಉಪನ್ಯಾಸಕರ ಮಾರ್ಗದರ್ಶನವೇ ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಕಾರಣ ಎಂದು ಭಾರತೀಯ ವಾಯುಸೇನೆಯ ನಿವೃತ್ತ ಅಧಿಕಾರಿ ಶಾಂತಾರಾಮ ಭಟ್ಕೆರೆ ಹೇಳಿದರು.
ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಅವರ ಸಾಧನೆಗೆ ಶಕ್ತಿಯಾದ ಉಪನ್ಯಾಸಕರ ಸನ್ಮಾನಿಸುವ ವಿಧಾತ್ರಿ ಅವಾರ್ಡ್ - 2025 ಉದ್ಘಾಟಿಸಿ ಮಾತನಾಡಿದರು.
ಪಾಲಕರನ್ನು ಮತ್ತು ವಿದ್ಯೆ ಕಲಿಸಿದ ಗುರುಗಳನ್ನು ಸದಾ ಗೌರವಿಸಬೇಕು. ನಿಮ್ಮೆಲ್ಲರ ಸಾಧನೆಯ ಹಿಂದಿನ ಶಕ್ತಿಯಾದ ವಿಧಾತ್ರಿ ಅಕಾಡೆಮಿ ಪರಿಶ್ರಮ ಅಭಿನಂದನೀಯ. ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತ್ಯುತ್ತಮ ಫಲಿತಾಂಶ ನೀಡುವ ಸಂಸ್ಥೆ ಎಂಬುದು ತಾಲೂಕಿಗೂ ಹೆಮ್ಮೆಯ ಸಂಗತಿ. ಯಾವುದೇ ವಿದ್ಯಾರ್ಥಿ ವಾಯುಸೇನೆಗೆ ಅಥವಾ ಏರೋನಾಟಿಕ್ಸ್ ಇಂಜಿನಿಯರಿAಗ್ ಮಾಡುವುದಿದ್ದರೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡಲು ಸಿದ್ಧ ಎಂದರು.
ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 5 ನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಅನನ್ಯ ಭಾಗ್ವತ್, ಸಾಗರ ನಾಯ್ಕ ಹಾಗೂ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ 132 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ ಪ್ರಾಸ್ತಾವಿಕ ಮಾತುಗಳಲ್ಲಿ ವಿದ್ಯಾರ್ಥಿಗಳಿಗೆ ಶುಭಕೋರಿದರು. ವಿದ್ಯಾರ್ಥಿಗಳ ಸಾಧನೆಯ ಹಿಂದಿನ ಶಕ್ತಿಯಾದ ಎಲ್ಲಾ ಉಪನ್ಯಾಸಕರನ್ನು ಸನ್ಮಾನಿಸಿದರು.
ಪ್ರಾಚಾರ್ಯ ಕಿರಣ ಭಟ್ಟ ಸ್ವಾಗತಿಸಿದರು. ಉಪನ್ಯಾಸಕಿ ದೀಕ್ಷಿತಾ ಕುಮಟಾಕರ ಕಾರ್ಯಕ್ರಮ ನಿರೂಪಿಸಿದರು, ಉಪನ್ಯಾಸಕ ಚಿದಾನಂದ ಭಂಡಾರಿ ವಂದಿಸಿದರು. ಉಪಪ್ರಾಚಾರ್ಯೆ ಸುಜಾತಾ ಹೆಗಡೆ ಹಾಗೂ ಇತರರು ಇದ್ದರು.