ಜಿಲ್ಲೆ

ವಿಧಾನ ಪರಿಷತ್ ಚುನಾವಣೆ: ಎಸ್.ಎಲ್.ಭೋಜೇಗೌಡ ಸೇರಿದಂತೆ ಮೂವರು ನಾಮಪತ್ರ ಸಲ್ಲಿಕೆ

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರ, ನೈಋತ್ಯ ಪದವೀಧರರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ತಲಾ ಒಬ್ಬ ಅಭ್ಯರ್ಥಿ ಸೇರಿ ಒಟ್ಟಾರೆ ಮೂವರು ಸೋಮವಾರ ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.


ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ದಾವಣಗೆರೆ ಜಿಲ್ಲೆ ವ್ಯಾಪ್ತಿಯ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಹಾಲಿ ಶಾಸಕ, ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ 3 ನಾಮಪತ್ರವನ್ನು ಪ್ರತ್ಯೇಕವಾಗಿ ಸಲ್ಲಿಸಿದರು. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯೂ ಆಗಿರುವ ಅವರು, ಬಿಜೆಪಿಯ ಮಾಜಿ ಸಚಿವರಾದ ಕೆ.ಜಿ.ಬೋಪಯ್ಯ, ಜಿ.ಎನ್.ಜೀವರಾಜ್, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಜೆಡಿಎಸ್‌ನ ಮಾಜಿ ಸಚಿವರಾದ ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಎಂಎಲ್‌ಸಿ ಸಿ.ಎನ್.ಮಂಜೇಗೌಡ ಇತರ ಮುಖಂಡರು ಸಂದರ್ಭದಲ್ಲಿದ್ದರು.


ನೈಋತ್ಯ ಪದವೀಧರರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಧನಂಜಯ್ ಸರ್ಜಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲೂ ಬಿಜೆಪಿ, ಜೆಡಿಎಸ್ ಮುಖಂಡರಿದ್ದರು.


ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆ ವ್ಯಾಪ್ತಿಯ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದ ಕೆ.ಆರ್.ರಾಜು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಚುನಾವಣಾಧಿಕಾರಿಯಾಗಿರುವ ಮೈಸೂರು ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ನಾಮಪತ್ರ ಸ್ವೀಕರಿಸಿದರು.

ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಪ್ರಾದೇಶಿಕ ಕಚೇರಿ ಎದುರು ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿವಿಧ ಜಿಲ್ಲೆಗಳಿಂದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು, ಮುಖಂಡರು ಕಚೇರಿ ಎದುರು ಜಮಾವಣೆಗೊಂಡಿದ್ದರು.

ಮೇ 16 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

ನಾಮಪತ್ರ ಸಲ್ಲಿಕೆಗೆ ಇನ್ನು 2 ದಿನ ಮಾತ್ರ ಬಾಕಿ ಉಳಿದಿದ್ದು, ಮೇ 16 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಮೇ 17ರಂದು ನಾಮಪತ್ರಗಳ ಪರಿಶೀಲನೆ, ಮೇ 20ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಜೂನ್ 3ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನದ ನಡೆಯಲಿದ್ದು, ಜೂ.6ರಂದು ಮತ ಎಣಿಕೆ ನಡೆಯಲಿದೆ.