ಚನ್ನಗಿರಿ: ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಷಹಾಜಿರಾಜೆ ಬೋಂಸ್ಲೆ ಮಹಾರಾಜರು ಭಾರತದಲ್ಲಿ ಜನಿಸಿ, ಹಿಂದು ಸ್ವರಾಜ್ಯ ಸ್ಥಾಪನೆ ಮಾಡಿದರು ಎಂದು ವಿಧಾನ ಪರಿಷತ್ ಸದಸ್ಯ ಎಂ.ಜಿ. ಮಾರುತಿರಾವ್ ಮೂಳೆ ತಿಳಿಸಿದರು.
ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ಗುರುವಾರ ಷಹಾಜಿ ರಾಜೆ ಬೋಂಸ್ಲೆ ಅವರ ಸಮಾಧಿ ಆವರಣದಲ್ಲಿ ಬೋಂಸ್ಲೆ ಸ್ಮಾರಕ ಅಭಿವೃದ್ಧಿ ಮತ್ತು ಸೇವಾಸಂಸ್ಥೆ ಸಹಯೋಗದಲ್ಲಿ 361 ನೇ ಪುಣ್ಯರಾಧನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿ ಸಮಾಧಿ ರಾಜ್ಯದ ಹೊದಿಗೆರೆ ಗ್ರಾಮದಲ್ಲಿರುವುದು ನಮ್ಮ ಸೌಭಾಗ್ಯ. ಇದನ್ನು ಅಭಿವೃದ್ಧಿ ಪಡಿಸಲು ಎಲ್ಲರ ಸಹಕಾರ ಮುಖ್ಯ ಎಂದರು.
ಷಹಾಜಿ ಮಹಾರಾಜರ ಕುರಿತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ, ಕೇಂದ್ರ ಮತ್ತು ರಾಜ್ಯದ ಅನುದಾನ ಪಡೆದು ಸಮಾಧಿ ಸ್ಥಳದ ಅಭಿವೃದ್ಧಿಗೆ ಅನುಮತಿ ಪಡೆಯಬೇಕಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಹೊದಿಗೆರೆ ರಮೇಶ್ ಮಾತನಾಡಿ, ಷಹಾಜಿ ಮಹಾರಾಜರು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ದೇಶ, ನೆಲ, ಜಲ, ಸಂಸ್ಕೃತಿ ಕಾಪಾಡಿದಂತಹ ಮಹಾಪರಾಕ್ರಮಿ. ಇಂತಹ ದಾರ್ಶನಿಕ ಮಹಾಪುರುಷರನ್ನು ಜಾತಿಗೆ ಸೀಮಿತಗೊಳಿಸದೇ ಸಮಾಜದ ಎಲ್ಲ ವರ್ಗದವರು ಸೇರಿ ಜಯಂತಿ, ಪುಣ್ಯಸ್ಮರಣೆ ಆಚರಿಸಬೇಕು ಎಂದರು.
ಸಮಾಧಿ ಸ್ಥಳದ ಅಭಿವೃದ್ಧಿಗೆ ವೈಯಕ್ತಿಕವಾಗಿ 1 ಲಕ್ಷ ರೂ. ದೇಣಿಗೆ ನೀಡಿದ್ದೇನೆ. ಅವಶ್ಯವಿದ್ದರೆ ಧನಸಹಾಯ ಮಾಡುವ ಜತೆಗೆ ರಾಜ್ಯದ ಲೋಕೋಪಯೋಗಿ ಇಲಾಖೆಯ ಸಚಿವರಾದ ರಮೇಶ್ ಜಾರಕಿಹೊಳಿ ಇವರನ್ನು ಭೇಟಿ ಮಾಡಿ, ಅವರಿಂದಲೂ ಅನುದಾನ ಕೊಡಿಸುವುದಾಗಿ ತಿಳಿಸಿದರು.
ತಾಲೂಕು ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ಎಂ.ಬಿ. ಶಿವಾಜಿರಾವ್ ಜಾಧವ್ ಮಾತನಾಡಿ, ವೀರತ್ವಕ್ಕೆ ಹೆಸರಾಗಿದ್ದ ಷಹಾಜಿ ಮಹಾರಾಜರು ಇಲ್ಲಿಗೆ ಹುಲಿ ಬೇಟೆಗೆಂದು ಬಂದಾಗ ಅಕಾಲಿಕ ಮರಣ ಹೊಂದುತ್ತಾರೆ. ಆಗ ಅವರ ದೇಹವನ್ನು ನಮ್ಮ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿಯೇ ಸಮಾಧಿ ಮಾಡಲಾಗಿದೆ. ಈ ಸಮಾಧಿ ಕರ್ನಾಟಕದ ಆಸ್ತಿ, ಅದರ ರಕ್ಷಣೆ, ಜವಾಬ್ದಾರಿ ಎಲ್ಲರದಾಗಿದೆ ಎಂದರು.
ಅಧ್ಯಕ್ಷತೆಯನ್ನು ಷಹಾಜಿ ಸ್ಮಾರಕ ಅಭಿವೃದ್ಧಿ ಮತ್ತು ಸೇವಾಸಂಸ್ಥೆಯ ಅಧ್ಯಕ್ಷ ವೈ. ಮಲ್ಲೇಶ್‌ರಾವ್ ಶಿಂಧೆ ವಹಿಸಿದ್ದರು. ಕ್ಷತ್ರಿಯ ಮರಾಠ ಸಮಾಜದ ಮಾಲತೇಶರಾವ್ ಜಾದವ್, ಗೋಪಾಲರಾವ್ ಮಾನೆ, ಶ್ರೀನಿವಾಸ್‌ರಾವ್ ಮಧನೆ, ಬಿ.ಕೆ. ದಿನೇಶ್, ಅಣ್ಣೊಜಿರಾವ್, ಬಿ.ಎಂ. ಕುಬೇಂದ್ರೋಜಿರಾವ್, ಎಂ.ಎಂ. ಮಂಜುನಾಥ್ ಜಾಧವ್, ಲತಾ ಮಂಜುನಾಥ್, ಗ್ರಾಪಂ ಅಧ್ಯಕ್ಷೆ ರೇಣುಕಮ್ಮ ದಿವಾಕರ್, ಪುರಸಭೆಯ ಸದಸ್ಯ ಶ್ರೀಕಾಂತ್, ವಕೀಲ ರಾಮಚಂದ್ರರಾವ್ ಇದ್ದರು.