ಜಿಲ್ಲೆ

ಸಿಎಂ ಜತೆ ಸಚಿವ ಜೆ.ಸಿ.ಮಾಧುಸ್ವಾಮಿ ವಿಡಿಯೋ ಸಂವಾದ

Tumakuru

ತುಮಕೂರು: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ಕೋವಿಡ್ ಪರೀಕ್ಷೆ ಪ್ರಯೋಗಾಲಯಗಳ ಅವಶ್ಯಕತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.

ಡಿಸಿ ಕಚೇರಿಯಲ್ಲಿ ಸೋಮವಾರ ಸಂಜೆ ಸಿಎಂ ಜತೆ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಆರ್‌ಟಿಸಿಪಿಆರ್ ಲ್ಯಾಬ್‌ನಲ್ಲಿ ದಿನಕ್ಕೆ 450ಕ್ಕಿಂತ ಹೆಚ್ಚು ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹೆಚ್ಚಿನ ಲ್ಯಾಬ್‌ಗಳ ಅವಶ್ಯಕತೆ ಇದೆ, ತುಮಕೂರು ಜಿಲ್ಲೆಗೆ ಹೆಚ್ಚುವರಿಯಾಗಿ ಬೆಂಗಳೂರಿನ ಯಾವುದಾದರೊಂದು ಲ್ಯಾಬ್‌ನ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು.

ಮುಂಗಾರು ಹಂಗಾಮಿನಲ್ಲಿ ಶೇ.65 ಹೆಚ್ಚಿನ ಮಳೆಯಾಗಿದೆ, ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯ ಕೊಳವೆಬಾವಿಗಳು ಮರುಪೂರಣವಾಗಿಲ್ಲ, ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮಹಾಮಾರಿ ಕರೊನಾ ಹಳ್ಳಿಗಳಿಗೂ ಕಾಲಿಟ್ಟಿರುವುದರಿಂದ ಜಾನುವಾರುಗಳ ಮೇವಿಗೆ ಸಮಸ್ಯೆಯಾಗಿದೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದರು.

ಜಿಲ್ಲೆಯಲ್ಲಿ 361 ಕೋವಿಡ್ 19 ಸಕ್ರಿಯ ಪ್ರಕರಣಗಳಿವೆ, 15 ಮರಣ ಹೊಂದಿದ್ದಾರೆ. ಈ ಪೈಕಿ ವೃದ್ಧರು, ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದವರು ಹೆಚ್ಚಿನ ಪ್ರಮಾಣದಲ್ಲಿ ಮರಣ ಹೊಂದಿದ್ದಾರೆ. ರೋಗ ಲಕ್ಷಣ ಕಂಡ ಕೂಡಲೇ ಆಸ್ಪತ್ರೆಗೆ ದಾಖಲಾಗದೇ ವಿಳಂಬ ಮಾಡುತ್ತಿರುವುದೂ ಸಾವಿನ ಪ್ರಮಾಣ 15ಕ್ಕೇರಿದೆ. ಚಿಕಿತ್ಸೆಗೆ ಬೆಂಗಳೂರಿನಲ್ಲಿ ಹಾಸಿಗೆ ಸಿಗದಿರುವವರೂ ತುಮಕೂರು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಸಿಎಂಗೆ ಮಾಹಿತಿ ನೀಡಿದರು.

ಕೋವಿಡ್ 19 ಸೋಂಕಿತರಿಗೆ ತ್ವರಿತವಾಗಿ ಚಿಕಿತ್ಸೆ ನೀಡಲು ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿಯೂ 100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ರೋಗಲಕ್ಷಣಗಳಿಲ್ಲದ ಸೋಂಕಿತರಿಗೆ ಕೇರ್ ಸೆಂಟರ್‌ಗಳಲ್ಲಿಯೇ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಣ್ಣ, ಪುಟ್ಟ ರೋಗಗಳಿಗೂ ಚಿಕಿತ್ಸೆ ನೀಡಲು ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ 400 ಬೆಡ್‌ಗಳ ವ್ಯವಸ್ಥೆಯಿದ್ದು, ಈ ಪೈಕಿ 200 ಹಾಸಿಗೆಗಳಿಗೆ ಹೈಪ್ರೋ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿದೆ. ಅತೀ ಗಂಭೀರ ಪರಿಸ್ಥಿತಿಯಲ್ಲಿರುವ ಕೋವಿಡ್ 19 ಸೋಂಕಿತರನ್ನು ಜಿಲ್ಲಾಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 20 ದಿನಗಳಿಂದ ಹೆಚ್ಚಿನ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗುತ್ತಿವೆ. ಬಹುತೇಕ ಸೋಂಕಿತರು ಬೆಂಗಳೂರಿಗೆ ಪ್ರಯಾಣ ಬೆಳೆಸಿರುವ ಹಿನ್ನೆಲೆಯುಳ್ಳವರಾಗಿದ್ದು, ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆಯನ್ನು ಶಿಸ್ತುಬದ್ಧವಾಗಿ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ ಹಾಸಿಗೆಗಳ ಕೊರತೆಯಿಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್‌ಸಿಂಗ್, ಜಿಲ್ಲಾ ಪಂಚಾಯಿತಿ ಸಿಇಒ ಶುಭಾಕಲ್ಯಾಣ್, ಎಸ್‌ಪಿ ಡಾ.ಕೆ.ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಡಿಹೆಚ್‌ಒ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ, ಎಸಿ ಅಜಯ್ ಇದ್ದರು.

ಸಿದ್ಧಗಂಗಾ ಆಸ್ಪತ್ರೆಯಲ್ಲಿ ಭಾರತೀಯ ವೈದ್ಯಕೀಯ ಸಂಘದವರು(ಐಎಂಎ) 100 ಬೆಡ್‌ಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿರುವ 14 ಖಾಸಗಿ ಆಸ್ಪತ್ರೆಗಳೂ ಕೂಡ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಹಾಸಿಗೆ ಒದಗಿಸಲು ಅನುಮತಿಸಿದ್ದಾರೆ. ರಾಕೇಶ್‌ಕುಮಾರ್ ಜಿಲ್ಲಾಧಿಕಾರಿ