ಜಿಲ್ಲೆ

ಚುನಾವಣಾ ಫಲಿತಾಂಶ ಅಧಿಕೃತಗೊಳ್ಳುವ ಮೊದಲೇ ಸಂಸದರ ನೇತೃತ್ವದಲ್ಲಿ ವಿಜಯೋತ್ಸವ

ಚಿಕ್ಕಬಳ್ಳಾಪುರ: ಚುನಾವಣಾ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಬಿಜೆಪಿ ಬೆಂಬಲಿತರಾದ ನಗರಸಭಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎ.ಗಜೇಂದ್ರ ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ನಾಗರಾಜ್ ವಿಜಯೋತ್ಸವ ಆಚರಿಸಿದರು.
ಇಲ್ಲಿನ ನಗರಸಭಾ ಕಚೇರಿಯ ಸಭಾಂಗಣದಲ್ಲಿ ಉಪ ವಿಭಾಗಾಧಿಕಾರಿ ಅಶ್ವಿನ್ ನೇತೃತ್ವದಲ್ಲಿ ಗುರುವಾರ ಚುನಾವಣಾ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಅಂಬರೀಷ್ ಮತ್ತು ಬಿಜೆಪಿಯಿಂದ ಗಜೇಂದ್ರ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಮೀನಾಕ್ಷಿ ಮಿಲ್ಟನ್ ವೆಂಕಟೇಶ್ ಮತ್ತು ಬಿಜೆಪಿಯಿಂದ ನಾಗರಾಜ್ ಉಮೇದುವಾರಿಕೆ ಸಲ್ಲಿಸಿದರು.
35 ಮತಗಳ ಪೈಕಿ ಗಜೇಂದ್ರ 19 ಮತ್ತು ಅಂಬರೀಷ್ 16 ಮತಗಳು, ನಾಗರಾಜ್ 19, ಮೀನಾಕ್ಷಿ 15 ಮತಗಳನ್ನು ಪಡೆದುಕೊಂಡರು ಎಂಬ ಮಾಹಿತಿ ಲಭ್ಯವಾಗಿದೆ.    

*ಲಕೋಟೆಯಲ್ಲಿ ಫಲಿತಾಂಶ*
ಮತದಾರ ಪಟ್ಟಿಗೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಲಾಗಲಿಲ್ಲ.
ವಿಧಾನಪರಿಷತ್ ಸದಸ್ಯರ ಹೆಸರನ್ನು ನಿಯಮಬಾಹಿರ ಮತ್ತು ಆತುರಾತುರವಾಗಿ ಸೇರಿಸಲಾಗಿದೆ ಎಂಬುದಾಗಿ ಹೇಳಿ ನಗರಸಭಾ ಮಾಜಿ ಅಧ್ಯಕ್ಷ ಡಿ.ಎಸ್.ಆನಂದ್ ರೆಡ್ಡಿ ಬಾಬು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹಾಗೆಯೇ ನ್ಯಾಯಾಧೀಶರು ಚುನಾವಣಾ ಪ್ರಕ್ರಿಯೆ ಫಲಿತಾಂಶವನ್ನು ಘೋಷಿಸದೇ ಮುಚ್ಚಿದ ಲಕೋಟೆಯಲ್ಲಿ ಮಾಹಿತಿಯನ್ನು ನೀಡಲು ಆದೇಶಿಸಿದ್ದಾರೆ. ಇದಕ್ಕೆ ಚುನಾವಣಾಧಿಕಾರಿಗಳು ಯಾವುದೇ ಅಧಿಕೃತವಾಗಿ ಫಲಿತಾಂಶವನ್ನು ಪ್ರಕಟಿಸಲಿಲ್ಲ.

* ಚಿಕ್ಕಬಳ್ಳಾಪುರ ನಗರಸಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ನಿಯಾಮನುಸಾರ ನಡೆದಿದೆ. ಆದರೆ, ನ್ಯಾಯಾಲಯದ ಆದೇಶ ಹಿನ್ನೆಲೆಯಲ್ಲಿ  ಫಲಿತಾಂಶವನ್ನು ಘೋಷಿಸಿಲ್ಲ. ಇಲ್ಲಿನ ಪ್ರಕ್ರಿಯೆಗಳ ನಿರ್ವಹಣೆ ಬಗ್ಗೆ ನ್ಯಾಯಾಲಯಕ್ಕೆ ಸಂಪೂರ್ಣ ವರದಿ ಸಲ್ಲಿಸಲಾಗುತ್ತದೆ.

ಡಿ.ಎಚ್.ಅಶ್ವಿನ್, ಉಪ ವಿಭಾಗಾಧಿಕಾರಿ ಮತ್ತು ಚಿಕ್ಕಬಳ್ಳಾಪುರ ನಗರಸಭಾ ಚುನಾವಣಾ ಅಧಿಕಾರಿ