ಜಿಲ್ಲೆ

ಕಾಂಗ್ರೆಸ್ ಬೆಂಬಲಿತರ ಗೆಲುವು :ಗ್ರಾಮ ಪಂಚಾಯಿತಿ ಉಪಚುನಾವಣೆ

ಪುತ್ತೂರು ಗ್ರಾಮಾಂತರ: ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮ ಪಂಚಾಯಿತಿಯ ಮಾಡ್ನೂರು 2ನೇ ವಾರ್ಡ್, ಕೆದಂಬಾಡಿ ಗ್ರಾಪಂ 4ನೇ ವಾರ್ಡ್‌ನ ತಲಾ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ಕೆದಂಬಾಡಿ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತರ ವಶದಲ್ಲಿದ್ದ ಸ್ಥಾನ ಈ ಬಾರಿ ಕಾಂಗ್ರೆಸ್ ಪಾಲಾಗಿದ್ದು, ಅರಿಯಡ್ಕದಲ್ಲಿ ಕಾಂಗ್ರೆಸ್ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಒಟ್ಟು 10 ಸದಸ್ಯ ಸ್ಥಾನಗಳನ್ನು ಹೊಂದಿರುವ ಕೆದಂಬಾಡಿ ಗ್ರಾಪಂ ನಲ್ಲಿ 7 ಬಿಜೆಪಿ ಬೆಂಬಲಿತ, 2 ಕಾಂಗ್ರೆಸ್ ಬೆಂಬಲಿತ, 1 ಪಕ್ಷಾತೀತ ನೆಲೆಯಲ್ಲಿ ಗೆಲುವು ಸಾಧಿಸಿದ್ದ ಸದಸ್ಯರಿದ್ದರು. ಇದೀಗ ಈ ಫಲಿತಾಂಶದಿಂದಾಗಿ ಕಾಂಗ್ರೆಸ್ ಸದಸ್ಯರ ಸದಸ್ಯ ಬಲ 3ಕ್ಕೆ ಏರಿದೆ.

ಅರಿಯಡ್ಕ ಮತ್ತೆ ಕಾಂಗ್ರೆಸ್‌ಗೆ : ಅರಿಯಡ್ಕ ಗ್ರಾಪಂ ಮಾಡ್ನೂರು 2ನೇ ವಾರ್ಡ್‌ನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಸ್ಥಾನದ ಕಾಂಗ್ರೆಸ್ ಬೆಂಬಲಿತ ಸದಸ್ಯ ಶಂಕರ ಮಾಡಂದೂರು ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಬೆಂಬಲಿತರ ನಡುವೆ ನೇರ ಸ್ಪರ್ಧೆ ನಡೆದಿತ್ತು. ಈ ಸ್ಥಾನದಲ್ಲಿ ಚಲಾವಣೆಯಾದ ಒಟ್ಟು 742 ಮತಗಳ ಪೈಕಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿನಯ ಕುಮಾರ್ ಮಾಡ್ನೂರು 443 ಮತಗಳನ್ನು ಪಡೆದು 144 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ 289 ಮತಗಳನ್ನು ಮಾತ್ರ ಪಡೆಯುವಲ್ಲಿ ಶಕ್ತರಾಗಿದ್ದಾರೆ. 10 ಮತಗಳು ತಿರಸ್ಕೃತಗೊಂಡಿವೆ. ಕಾಂಗ್ರೆಸ್ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕೆದಂಬಾಡಿಯಲ್ಲಿ ಬಿಜೆಪಿ ಸ್ಥಾನ ಕೈ ವಶ : ಕೆದಂಬಾಡಿ ಗ್ರಾಪಂ ವಾರ್ಡ್ 4ರ ಸಾಮಾನ್ಯ ಮೀಸಲು ಸ್ಥಾನದ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ಭಾಸ್ಕರ ರೈ ಮಿತ್ರಂಪಾಡಿ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಚಲಾವಣೆಯಾದ 633 ಮತಗಳ ಪೈಕಿ 272 ಮತಗಳನ್ನು ಪಡೆದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೆಲ್ವಿನ್ ಮೊಂತೆರೋ 30 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತರ ವಶದಲ್ಲಿದ್ದ ಈ ಸ್ಥಾನ ಕಾಂಗ್ರೆಸ್ ಬೆಂಬಲಿತರ ವಶವಾಗಿದೆ.