ಜಿಲ್ಲೆ

ಉಪಚುನಾವಣೆಯಲ್ಲಿ ಗೆಲುವು, ಕಾಂಗ್ರೆಸ್​ ಸಂಭ್ರಮಾಚರಣೆ...

ಉಡುಪಿ: ರಾಜ್ಯದ ಶಿಗ್ಗಾಂವಿ, ಚನ್ನಪಟ್ಟಣ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಹಾಗೂ ವಯನಾಡ್​ ಲೋಕಸಭಾ ಕ್ಷೇತ್ರದ ಉಪಾಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬ್ರಹ್ಮಗಿರಿಯ ಕಾಂಗ್ರೆಸ್​ ಭವನದ ಮುಂಭಾಗದಲ್ಲಿ ಬ್ಲಾಕ್​ ಕಾಂಗ್ರೆಸ್​ ಸಮಿತಿ ವತಿಯಿಂದ ಶನಿವಾರ ಸಂಭ್ರಮ ಆಚರಿಸಲಾಯಿತು.

ರಮೇಶ್​ ಕಾಂಚನ್​ ನೇತೃತ್ವದಲ್ಲಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಪಾಲ್ಗೊಂಡು ಸಿಹಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಪಕ್ಷದ ಪ್ರಮುಖರಾದ ಮಹಾಬಲ ಕುಂದರ್​, ಪ್ರಖ್ಯಾತ್​ ಶೆಟ್ಟಿ, ಗಣೇಶ್​ ನೆರ್ಗಿ, ಸತೀಶಕುಮಾರ್​ ಮಂಚಿ, ಪ್ರಶಾಂತ್​ ಪೂಜಾರಿ, ನವೀನ್​ ಶೆಟ್ಟಿ, ಡಾ. ಸುನೀತಾ ಶೆಟ್ಟಿ, ರೋಶಿನಿ ಒಲಿವರ್​, ಗೀತಾ ವಾಗ್ಲೆ, ಯತೀಶ್​ ಕರ್ಕೇರ, ಲಕ್ಷ್ಮೀಕಾಂತ್​ ಬೆಸ್ಕೂರು, ಶೇಖ್​ ವಹೀದ್​, ರೊನಾಲ್ಡ್​ ಕರ್ಕಡ, ಕಮಲ್​ ಸುವರ್ಣ, ಸಜ್ಜನ್​ ಶೆಟ್ಟಿ, ಲಕ್ಷ್ಮಣ್​ ಪೂಜಾರಿ, ಆನಂದ್​ ಪೂಜಾರಿ ಕಿದಿಯೂರು, ಸಂಧ್ಯಾ ತಿಲಕ್​ರಾಜ್​ ಇತರರಿದ್ದರು.

ಬಿಜೆಪಿಗರ ಕಾಂಗ್ರೆಸ್​ಮುಕ್ತ ಕನಸು ನುಚ್ಚುನೂರು

ಉಡುಪಿ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ರಮೇಶ್​ ಕಾಂಚನ್​ ಮಾತನಾಡಿ, ಬಿಜೆಪಿಗರು ನಿರಂತರವಾಗಿ ಕಾಂಗ್ರೆಸ್​ನ ಜನಪರ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತ, ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದರು. ಆದರರೆ, ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿಕೂಟಕ್ಕೆ ಕ್ಷೇತ್ರದ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ರಾಜ್ಯದ ಇಬ್ಬರು ಮುಖ್ಯಮಂತ್ರಿಗಳ ಪುತ್ರರು ಹೀನಾಯವಾಗಿ ಸೋತಿದ್ದಾರೆ. ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಜನರು ಸಹಮತ ವ್ಯಕ್ತಪಡಿಸಿದ್ದಾರೆ ಎನ್ನುವುದಕ್ಕೆ ಈ ಫಲಿತಾಂಶವೇ ಸಾಕ್ಷಿಯಾಗಿದೆ. ಬಿಜೆಪಿಗರ ಕಾಂಗ್ರೆಸ್​ಮುಕ್ತ ಭಾರತದ ಕನಸು ನುಚ್ಚುನೂರಾಗಿದೆ ಎಂದು ಟೀಕಿಸಿದರು.

ಚುನಾವಣೋತ್ತರ ಸಮೀಕ್ಷೆಗಳೆಲ್ಲವೂ ಸುಳ್ಳಾಗಿದ್ದು, ಎಲ್ಲ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್​ ಗೆದ್ದಿದೆ. ಗ್ಯಾರಂಟಿ ಯೋಜನೆಗಳ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದ ಬಿಜೆಪಿಗರನ್ನು ಜನ ತಿರಸ್ಕರಿಸಿದ್ದಾರೆ. ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರು ತಮ್ಮ ಇಳಿವಯಸ್ಸಿನಲ್ಲೂ ಮೊಮ್ಮಗನನ್ನು ಗೆಲ್ಲಿಸಲೇಬೇಕೆಂದು ಹಠತೊಟ್ಟು ಪ್ರಚಾರ ನಡೆಸಿದ್ದರು. ಆದರೆ, ಒಕ್ಕಲಿಗರೆಲ್ಲ ಕಾಂಗ್ರೆಸ್​ಗೆ ಆಶೀರ್ವದಿಸಿದ್ದು, ದೇವೇಗೌಡರಿಗೆ ಕಾಯಂ ವಿಶ್ರಾಂತಿ ನೀಡಿದ್ದಾರೆ. | ಅಶೋಕಕುಮಾರ್​ ಕೊಡವೂರು. ಅಧ್ಯಕ್ಷ, ಉಡುಪಿ ಜಿಲ್ಲಾ ಕಾಂಗ್ರೆಸ್​