ಮಳವಳ್ಳಿ: ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯ ಸ್ಥಾನಗಳಿಗೆ ಶನಿವಾರ ಪಟ್ಟಣದ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಚುನಾವಣೆ ನಡೆಯಿತು.
ಇತ್ತೀಚೆಗೆ ಸರ್ಕಾರಿ ನೌಕರರ ಸಂಘಕ್ಕೆ 33 ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿತ್ತು. ಆಡಳಿತ ಮಂಡಳಿ ಅಧ್ಯಕ್ಷ, ಖಜಾಂಚಿ, ರಾಜ್ಯ ಪರಿಷತ್ ಸದಸ್ಯ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆಗಳು ನಡೆದವು. ಅಧ್ಯಕ್ಷ ಸ್ಥಾನಕ್ಕೆ ಕಣದಲ್ಲಿದ್ದ ಎಚ್.ಮಲ್ಲಿಕಾರ್ಜುನಯ್ಯ 17 ಮತ ಗಳಿಸಿ ವಿಜೇತರಾದರೆ, ಪ್ರತಿಸ್ಪರ್ಧಿ ನಾಗೇಶ್ 16 ಪರಾಭವಗೊಂಡರು. ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಪುಟ್ಟಸ್ವಾಮಿ 16 ಮತ ಪಡೆದರೆ, ಚಂದ್ರಶೇಖರ್ 17 ಮತ ಪಡೆದು ಜಯಗಳಿಸಿದರು.
ಖಜಾಂಚಿ ಸ್ಥಾನಕ್ಕೆ ಎಂ. ಶಿವಶಂಕರ್ ಒಬ್ಬರೇ ಅಭ್ಯರ್ಥಿಯಾಗಿ ಕಣದಲ್ಲಿದ್ದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ನಿವೃತ್ತ ಪ್ರಾಂಶುಪಾಲ ಪುಟ್ಟಸ್ವಾಮೀಗೌಡ ಕರ್ತವ್ಯ ನಿರ್ವಹಿಸಿದರು.
ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಮಾತನಾಡಿ, ನನ್ನ ಮೇಲೆ ವಿಶ್ವಾಸವಿಟ್ಟು ಸತತ ಎರಡನೇ ಅವಧಿಗೆ ಮರು ಆಯ್ಕೆ ಮಾಡಿರುವ ಎಲ್ಲ ನೌಕರವರ್ಗ ಹಾಗೂ ಪದಾಧಿಕಾರಿಗಳಿಗೆ ಋಣಿಯಾಗಿದ್ದೇನೆ ಎಂದ ಅವರು, ಇಂದಿನ ಆಯ್ಕೆಯಿಂದ ನನಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿದ್ದು, ಪಟ್ಟಣದಲ್ಲಿ ನೌಕರರ ಭವನ ನಿರ್ಮಾಣದ ಜತೆಗೆ ನೌಕರರ ಪತ್ತಿನ ಸಹಕಾರ ಸಂಘವನ್ನು ಅನುಷ್ಠಾನಕ್ಕೆ ತರಬೇಕೆಂಬ ಹಂಬಲವಿದೆ. ಅದಕ್ಕಾಗಿ ನಮ್ಮ ಸ್ಥಳೀಯ ಶಾಸಕರ ಸಹಕಾರವನ್ನು ಕೋರಲಾಗುವುದು. ಎಲ್ಲರ ಸಹಕಾರ ಪಡೆದುಕೊಂಡು ಎಲ್ಲ ಪೂರ್ವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಶ್ರಮಿಸುವುದಾಗಿ ತಿಳಿಸಿದರು. ಅಲ್ಲದೆ ನಮ್ಮ ನೌಕರ ವರ್ಗದ ಹಿತಕಾಯುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿ ಕೆಲಸ ಮಾಡುವೆ ಎಂದರು.
ನಿರ್ದೇಶಕರಾದ ಎಚ್.ಎಸ್. ಶಿವಶಂಕರ್, ಜಿ.ಎಸ್.ನಾಗರಾಜು, ಶಿವಕುಮಾರ್, ರಾಮಮೂರ್ತಿ, ಸ್ವಾಮಿ, ಗಂಗಾಧರಸ್ವಾಮಿ, ನಂದೀಶ್, ರವಿಕುಮಾರ್ ಸೇರಿದಂತೆ ಹಲವು ಸರ್ಕಾರಿ ನೌಕರರು ಉಪಸ್ಥಿತರಿದ್ದರು.