ಹುಬ್ಬಳ್ಳಿ : ನನ್ನ ಗೆಲುವನ್ನು ಮತದಾರ ಪ್ರಭುಗಳಿಗೆ ಅರ್ಪಿಸಲಿದ್ದೇನೆ. ಈ ಗೆಲುವಿಗೆ ಅವರೇ ಕಾರಣ ಎಂದು ಲೋಕಸಭಾ ಚುನಾವಣೆಯಲ್ಲಿ ಸತತ 5ನೇ ಬಾರಿ ಗೆಲುವು ಸಾಧಿಸಿರುವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಅವಿರತವಾಗಿ ಇಂದಿನವರೆಗೂ ಶ್ರಮಿಸಿದ್ದೀರಿ. ನಿಮ್ಮ ಈ ಶ್ರಮ ಹಾಗೂ ಸಹಕಾರ ಅಮೋಘವಾದದ್ದು. ಬೇಸಿಗೆಯ ಉರಿಬಿಸಿಲನ್ನು ಲೆಕ್ಕಿಸದೇ ದೇಶಕ್ಕಾಗಿ ಹಾಗೂ ನರೇಂದ್ರ ಮೋದಿಯವರಿಗಾಗಿ ಶ್ರಮ ವಹಿಸಿದ್ದು ಅಭಿನಂದನೀಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತ್ತೊಂದು ಬಾರಿ ವಿಜಯ ನನ್ನದಾಗಿದೆ. ತಾಯಿ ಭಾರತಿಯ ಸೇವೆ ಮಾಡಲು ಮತ್ತೊಮ್ಮೆ ಮೋದಿ ಸರ್ಕಾರ ರಚನೆಯಾಗಲು ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಆಶೀರ್ವಾದ ಮಾಡಿದ್ದೀರಿ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮುಂಬರುವ ದಿನಗಳಲ್ಲಿ ದೇಶ ದೊಡ್ಡ ಜಾಗತಿಕ ಶಕ್ತಿಯಾಗಿ ಬೆಳೆಯುವಲ್ಲಿನ ಕಾರ್ಯಕ್ಕೆ ಸೇವೆ ಸಲ್ಲಿಸುವ ಅವಕಾಶವನ್ನು ಮತದಾರರು ನೀಡಿದ್ದಾರೆ ಎಂದಿದ್ದಾರೆ.
ಬಿಜೆಪಿಯಲ್ಲಿ ಸಾಮಾನ್ಯ ವ್ಯಕ್ತಿಯಾಗಿದ್ದ ನನ್ನನ್ನು ಸಂಸದನನ್ನಾಗಿ ಚುನಾಯಿಸಿ, ಕೇಂದ್ರ ಸರ್ಕಾರದಲ್ಲಿ ಮಂತ್ರಿಯನ್ನಾಗಿ ಮಾಡಿರುವ ಧಾರವಾಡ ಕ್ಷೇತ್ರದ ಮತದಾರರನ್ನು ಎಂದಿಗೂ ಮರೆಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪ್ರತಿ ಬಾರಿ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೂ ಮೊದಲು ನನ್ನ ಮತದಾರರನ್ನು ಸ್ಮರಿಸಿಕೊಳ್ಳುತ್ತೇನೆ ಎಂದಿದ್ದಾರೆ.