ಕಡೂರು: ಜನರಿಂದ ಆಯ್ಕೆಯಾದ ಪ್ರತಿಯೊಬ್ಬ ಜನಪ್ರತಿನಿಧಿಯೂ ಜನರ ಸೇವಕನಾಗಿ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಬೇಕಿದೆ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಹೇಳಿದರು.
ತಾಲೂಕಿನ ಮಲ್ಲೇಶ್ವರ ಸಮೀಪದ ಬೆಂಕಿ ಲಕ್ಷ್ಮಯ್ಯ ಸಮುದಾಯ ಭವನದಲ್ಲಿ ತಾಲೂಕು ಬಿಜೆಪಿ ಶನಿವಾರ ಏರ್ಪಡಿಸಿದ್ದ ಜನಸೇವಕ್ ಸಮಾವೇಶದಲ್ಲಿ ಮಾತನಾಡಿದರು.
ಸೋತರೂ ಜನರ ಮಧ್ಯೆ ನಿಂತು ಜನ ಸೇವೆ ಬಿಡದೆ, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ರಾಜಕಾರಣ ಮಾಡಬೇಕಿದೆ. ನೂತನವಾಗಿ ಆಯ್ಕೆಯಾದ ಗ್ರಾಪಂ ಸದಸ್ಯರು ಬಸವಣ್ಣನವರ ವಚನಗಳನ್ನು ಅಳವಡಿಸಿಕೊಂಡು ಆಡಳಿತ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಗ್ರಾಮದಿಂದ ದೇಶದವರೆಗೆ ಬಿಜೆಪಿ ಸದೃಢ ಆಡಳಿತ ನಡೆಸುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿರುವ ಸಾಧನೆಗಳನ್ನು ಪ್ರತಿ ಗ್ರಾಮಗಳಲ್ಲಿ ತಿಳಿಸುವ ಕಾರ್ಯವಗಬೇಕಿದೆ. ಮುಂದಿನ 15 ವರ್ಷ ಕ್ಷೇತ್ರದಲ್ಲಿ ಶಾಸಕನಾಗಿ ಅಭಿವೃದ್ಧಿ ಕಾರ್ಯ ಮಾಡಲಾಗುವುದು. ಗ್ರಾಮಗಳಿಗೆ ತೆರಳದೆ ಕಚೇರಿಯಲ್ಲಿ ಕೂತರೂ ಅಭಿವೃದ್ಧಿ ಕಾರ್ಯದಲ್ಲಿ ಹಿಂದೆ ಬಿದ್ದಿಲ್ಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಕೆ.ಕಲ್ಮುರಡಪ್ಪ ಮಾತನಾಡಿ, ಗ್ರಾಪಂ ಚುನಾವಣೆಗಳಲ್ಲಿ ಗೆಲುವು ಸಾಧಿಸಿರುವವರು ಜವಾಬ್ದಾರಿಯುತವಾಗಿ ಗ್ರಾಮದ ಅಭಿವೃದ್ಧಿಗೆ, ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು. ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವೇಳೆ ಭಿನ್ನಮತ ಬಾರದಂತೆ ಜನಸ್ನೇಹಿ ಆಡಳಿತ ನಡೆಸಬೇಕಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲೆಗೆ ಎರಡು ಕೊಡುಗೆಗಳನ್ನು ನೀಡಿದ್ದು, ಸಿ.ಟಿ.ರವಿ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದರೆ, ಬೆಳ್ಳಿಪ್ರಕಾಶ್ ಅವರಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಜಿಲ್ಲೆಗೆ ತನ್ನದೇ ಆದ ಕೊಡುಗೆ ನೀಡಿದೆ ಎಂದರು.