ಜಿಲ್ಲೆ

ವಿಕ್ಟೋರಿಯಾ ಆಸ್ಪತ್ರೆ ಕೈಬಿಟ್ಟ ನೌಕರರ ಮರು ನೇಮಕ

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸದಿಂದ ಕೈಬಿಡಲಾಗಿದ್ದ 55 ಗ್ರೂಪ್ ಡಿ ನೌಕರರನ್ನು ಪುನರ್ ನೇಮಕ ಮಾಡಿಕೊಳ್ಳುವುದರ ಜೊತೆಗೆ ಎರಡು ತಿಂಗಳ ವೇತನ ನೀಡುವುದಾಗಿ ಬೆಂಗಳೂರು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ತಿಳಿಸಿದೆ.

ಈ ಹಿಂದೆ ಸ್ವಿಸ್ ಏಜೆನ್ಸಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರನ್ನು ಹೊಸದಾಗಿ ಗುತ್ತಿಗೆ ಪಡೆದಿರುವ ಸ್ಪೂರ್ತಿ ಏಜೆನ್ಸಿ ಕೆಲಸದಿಂದ ತೆಗೆದು ಹಾಕಿತ್ತು. ಏಕಾಏಕಿ ಕೆಲಸದಿಂದ ತೆಗೆದಿದ್ದನ್ನು ವಿರೋಧಿಸಿ ಎಲ್ಲಾ 55 ಮಂದಿ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಹಳೆ ಏಜೆನ್ಸಿಯಲ್ಲಿ 147 ಮಂದಿ ಕಾರ್ಯ ನಿರ್ವಹಿಸುತ್ತಿದ್ದರು, ಹೊಸದಾಗಿ ಬಂದ ಏಜೆನ್ಸಿ ಇವರಲ್ಲಿ 92 ಮಂದಿಯನ್ನು ಮಾತ್ರ ತೆಗೆದುಕೊಂಡು 55 ಮಂದಿಯನ್ನು ಕೈಬಿಟ್ಟಿತ್ತು. ಇವರ ಬದಲಿಗೆ ಹೊಸಬರ ನೇಮಕ ಮಾಡಿಕೊಂಡಿತ್ತು. ಇದರಿಂದ ನೌಕರರು ಪ್ರತಿಭಟನೆ ಕೈಗೊಂಡಿದ್ದರು.

ಈ ಕುರಿತು ಬಿಎಂಸಿಆರ್‌ಐ ಡೀನ್ ಮತ್ತು ನಿರ್ದೇಶಕರ ಅಧ್ಯಕ್ಷತೆಯಲ್ಲಿ ವಿಶೇಷ ಸಮಿತಿ ರಚಿಸಲಾಗಿತ್ತು. ಸಮಿತಿಯು ಎರಡೂ ಏಜೆನ್ಸಿಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಚರ್ಚಿಸಿ, ಕೈಬಿಡಲಾಗಿದ್ದ 55 ಮಂದಿ ಕಳೆದ 10-15 ವರ್ಷಗಳಿಂದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಅನುಭವ ಹೊಂದಿದ್ದಾರೆ. ಹಾಗಾಗಿ ಅನುಭವ ಮತ್ತು ಮಾನವೀಯತೆ ಆಧಾರದ ಮೇಲೆ ಅವರನ್ನು ತಕ್ಷಣವೇ ನೇಮಕ ಮಾಡಿಕೊಳ್ಳುವಂತೆ ಹಾಗೂ ಹೊಸದಾಗಿ ನೇಮಕ ಮಾಡಿಕೊಂಡಿರುವವರನ್ನು ಬೇರೆ ಕಡೆಗೆ ನಿಯೋಜಿಸುವಂತೆ ಏಜೆನ್ಸಿ ಮುಖ್ಯಸ್ಥರಿಗೆ ಸಮಿತಿ ಸೂಚನೆ ನೀಡಿದೆ.

ಕೆಲಸದಿಂದ ಕೈಬಿಡಲಾಗಿದ್ದ ಎಲ್ಲ 55 ಮಂದಿ ಹಲವು ವರ್ಷಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಅನುಭವ ಹೊಂದಿದ್ದರು. ಹಾಗಾಗಿ ಅವರನ್ನೇ ನೇಮಿಸಿಕೊಳ್ಳುವಂತೆ ಹೊಸ ಏಜೆನ್ಸಿಗೆ ತಿಳಿಸಲಾಗಿದೆ. ಬುಧವಾರದಿಂದ ಎಲ್ಲರೂ ಕೆಲಸಕ್ಕೆ ಹಾಜರಾಗಲಿದ್ದಾರೆ. ಜೊತೆಗೆ ಸಿಬ್ಬಂದಿಗೆ ಕಳೆದ ಎರಡು ತಿಂಗಳ ವೇತನ ನೀಡಲು ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ಬಿಎಂಸಿಆರ್‌ಐ ಡೀನ್ ಮತ್ತು ನಿರ್ದೇಶಕ ಡಾ. ರಮೇಶ್ ಕೃಷ್ಣ ತಿಳಿಸಿದ್ದಾರೆ.