ಮಂಡ್ಯ: ಜಿಲ್ಲೆಯ ಸಾಂಸ್ಕೃತಿಕ ಹಾಗೂ ಜನಸಾಮಾನ್ಯರ ಪ್ರೀತಿಯಿಂದಾಗಿ ನನಗೆ ತವರಿಗೆ ಬಂದಂತೆ ಭಾಸವಾಗುತ್ತದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ ಮೋಹನ್ ಆಳ್ವ ಸಂತಸ ವ್ಯಕ್ತಪಡಿಸಿದರು.
ನಗರದ ರೈತಸಭಾಂಗಣದಲ್ಲಿ ಕರ್ನಾಟಕ ಸಂಘ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡರ-75ರ ಅಂಗವಾಗಿ ಆಯೋಜಿಸಿದ್ದ ಬದುಕು ಬರಹ: ವಿಚಾರಗೋಷ್ಠಿ ಹಾಗೂ ಆತ್ಮಕಥಾನಕ: ಹೋರಾಟದ ಹೆಜ್ಜೆಗಳು ಪುಸ್ತಕ ಬಿಡುಗಡೆ’ ಸಮಾರಂಭದಲ್ಲಿ ಮಾತನಾಡಿದರು.
ಪ್ರೊ.ಜೆಪಿ ಅವರ ಸಂಘಟನೆ ಮತ್ತು ಅವರಲ್ಲಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಒಳನೋಟಗಳನ್ನು ನೋಡಿದರೆ ಅವರೊಬ್ಬ ಸ್ಥಿತಪ್ರಜ್ಞ ವ್ಯಕ್ತಿ ಎನಿಸುತ್ತದೆ. ಅವರು ಸಾಂಸ್ಕೃತಿಕ ತಂಡವನ್ನು ಮುನ್ನಡೆ ತರುವ ಪ್ರಯತ್ನ ನಡೆಸಿರುವುದು ಮಾದರಿಯಾಗಿದೆ. ಇವತ್ತು ಸಮಾಜದಲ್ಲಿ ಮೌಲ್ಯಯುತವಾಗಿ ಬದುಕುವುದು ಹೇಗೆ ಎಂಬ ಆತಂಕ ನಮ್ಮೆಲ್ಲರನ್ನು ಕಾಡುತ್ತಿದೆ. ಏಕೆಂದರೆ, ಧರ್ಮ ಮತ್ತು ರಾಜಕೀಯ ಎರಡೂ ತಳಕು ಹಾಕಿಕೊಂಡು ಬೇರೆ ಆಯಾಮಗಳತ್ತ ಹೊರಳುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೆ ಮಾನವ ಧರ್ಮದ ಮೇಲೆ ಮಾತ್ರ ಈ ಸಮಾಜ ನಿಂತಿದೆ ಎಂಬುದನ್ನು ನಾವು ಕಡೆಗಣಿಸಬಾರದು. ಪ್ರೀತಿ, ವಿಶ್ವಾಸ, ಸಂಬಂಧಗಳು ನಮ್ಮ ಬದುಕನ್ನು ಶ್ರೀಮಂತಗೊಳಿಸುತ್ತವೆ ಎಂದು ನುಡಿದರು.
ಇಂದಿನ ಬೆಳವಣಿಗೆಯನ್ನು ಗಮನಿಸಿದರೆ ನಾವು ಎಂತಹವರಿಗೆ ವೋಟು ಹಾಕಿ ನಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿಕೊಂಡೆವು ಎಂದು ವಿಷಾದಿಸುವಂತಾಗಿದೆ. ಈ ದೇಶದ ಪ್ರತಿಭಾವಂತ ಯುವಶಕ್ತಿ ವಿದೇಶಗಳಿಗೆ ಪಲಾಯನವಾಗುತ್ತಿದ್ದರೆ, ವೈದ್ಯರನ್ನೇ ದೇವರು ಎಂದು ಪರಿಗಣಿಸುತ್ತಿದ್ದ ಜಾಗದಲ್ಲಿ ಇಂದು ವೈದ್ಯ ಲೋಕ ಆ ವಿಶ್ವಾಸವನ್ನು ಕಳೆದುಕೊಳ್ಳುತ್ತಿದೆ. ಒಂದು ರೀತಿ ಈವೆಂಟ್ ಮ್ಯಾನೇಜ್ಮೆಂಟ್ ವಿಜೃಂಬಿಸುತ್ತಿದೆಯೇನೋ ಎನಿಸುತ್ತದೆ. ಹಾಗಾಗಿ ಸಾಂಸ್ಕೃತಿಕ ಅಸ್ಮಿತೆ ಮತ್ತು ಧರ್ಮ ನಮ್ಮ ಎರಡು ಕಣ್ಣುಗಳಿದ್ದಂತೆ. ಹಾಗಾಗಿ ಪ್ರೊ.ಜೆಪಿಯವರಂತಹ ವ್ಯಕ್ತಿತ್ವಗಳು, ಮನಸ್ಸುಗಳ ಸಂಖ್ಯೆ ಹೆಚ್ಚಾಗಬೇಕೆಂದು ಅಭಿಪ್ರಾಯಪಟ್ಟರು.
ಸಾಹಿತಿ ಡಾ.ರಾಜಪ್ಪ ದಳವಾಯಿ, ಮಾಜಿ ಶಾಸಕ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಬಿ.ರಾಮಕೃಷ್ಣ, ಕೆ.ಟಿ.ಶ್ರೀಕಂಠೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಮಂಜುಳಾ ಜಯಪ್ರಕಾಶಗೌಡ ಇತರರಿದ್ದರು.
ಇದಕ್ಕೂ ಮುನ್ನ ಸಾಹಿತಿ ಡಾ.ರಾಗೌ ಅವರ ಅಧ್ಯಕ್ಷತೆಯಲ್ಲಿ ಆರಂಭವಾದ ವಿಚಾರಗೋಷ್ಠಿಯಲ್ಲಿ ಪ್ರೊ.ಜೆಪಿ ಅವರ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಎಸ್.ಮುದ್ದೇಗೌಡ, ಜೆಪಿ ಅವರ ವ್ಯಕ್ತಿಗತ ಸಂಬಂಧಗಳ ಕುರಿತು ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಕೆ.ಚಂದ್ರಶೇಖರ್‌ಗೌಡ, ರಂಗಭೂಮಿಯ ಒಡನಾಟದ ಕುರಿತು ನಿವೃತ್ತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರೇಗೌಡ ಮತ್ತು ಜೆಪಿ-ಕರ್ನಾಟಕ ಸಂಘ ಕುರಿತು ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಕೆ.ಹರೀಶ್‌ಕುಮಾರ್ ವಿಷಯ ಮಂಡಿಸಿದರು.