ಜಿಲ್ಲೆ

ಒಗ್ಗೂಡಿಸಿಕೊಂಡು ಹೋಗುವ ನಾಯಕತ್ವವಿರಲಿ: ಬೆಂಗಳೂರು ವಿವಿ ಕನ್ನಡ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ಸಲಹೆ

ಮಂಡ್ಯ: ಎಸ್.ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಜಾತಿ ಸಮೀಕ್ಷೆ ವೈಜ್ಞಾನಿಕವಾಗಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅನುಮೋದನೆಗೊಳ್ಳುವ ವಿಶ್ವಾಸವಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ಹೇಳಿದರು.

ನಗರದ ಗಾಂಧಿಭವನದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಆಯೋಜಿಸಿದ್ದ ಸಾಮಾಜಿಕ ಬದ್ಧತೆಯಲ್ಲಿ ಬದುಕಿನ ಸಾರ್ಥಕತೆ ಕುರಿತ ವಿಚಾರ ಚಿಂತನೆ ಹಾಗೂ ರಕ್ತದಾನಿಗಳಿಗೆ ಹೀರೋ ಆಫ್ ಸೊಸೈಟಿ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಣ್ಣ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಇದರಲ್ಲಿದೆ. ವರದಿ ಜಾರಿಯ ಮೂಲಕ ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಗಳಿಗೆ ಸ್ವಾಭಿಮಾನವಿರಬೇಕು. ಹಿಂಬಾಲಕತನ ಹೋಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ನಾಯಕತ್ವವನ್ನು ಬೆಳೆಸಿಕೊಳ್ಳಬೇಕು. ವಿಶೇಷವಾಗಿ ಸಣ್ಣ ಸಣ್ಣ ಸಮುದಾಯಗಳು ಪರಸ್ಪರ ವಿಶ್ವಾಸದಿಂದ ಮುನ್ನಡೆಯಬೇಕು. ಹಾಗ ಮಾತ್ರ ಬಹುಸಂಖ್ಯಾತ ಹಿಂದುಳಿದ ವರ್ಗಗಳಿಗೆ ರಾಜಕೀಯ ಶಕ್ತಿ ಮತ್ತು ಸಾಮಾಜಿಕ ಸಮಾನತೆ ಬರಲು ಸಾಧ್ಯವಾಗುತ್ತದೆ. ದೈಹಿಕವಾಗಿ ಬಲಹೀನ ಸ್ಥಿತಿಯಲ್ಲಿದ್ದಾಗ ಮತ್ತು ಸಾವಿನ ಅಂಚಿನಲ್ಲಿರುವ ಸಂದರ್ಭದಲ್ಲಿ ರಕ್ತದಾನ ಮಾಡಲಾಗುತ್ತದೆ. ರಕ್ತದಾನ ಆದ ನಂತರ ಕೊಂಚ ಬಲಿಷ್ಠವಾದ ಮೇಲೆ ಯಾವ ಜಾತಿ ಮತ್ತು ಧರ್ಮದ ಕುರಿತು ಚರ್ಚೆಗಳು ನಡೆಯುತ್ತವೆ. ಆದ್ದರಿಂದ ರಕ್ತದಾನ ಜಾತ್ಯಾತೀತ ವಾತಾವರಣವನ್ನು ಸೃಷ್ಠಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೀವದಾನದ ವಿಚಾರದಲ್ಲಿ ರಕ್ತದ ಶ್ರೇಷ್ಠತೆಯನ್ನು ಅರ್ಥೈಸಿಕೊಂಡಂತೆ ಸಮಾಜದಲ್ಲಿ ಕೂಡ ಬಲಹೀನ ಸಮುದಾಯಗಳಿಗೆ ಸಮಾನತೆಯ ರಕ್ತದಾನ ಮಾಡುವ ಅಗತ್ಯತೆ ಇದೆ ಎಂದು ಮಾರ್ಮಿಕವಾಗಿ ನುಡಿದರು.

ಜಾತಿ ಜಾತಿಗಳ ನಡುವೆ ಒಡೆದು ಹೋಗಿರುವ ಹಿಂದುಳಿದ ವರ್ಗಗಳಿಗೆ ರಾಜಕೀಯ ಮತ್ತು ಸಾಮಾಜಿಕ ಶಕ್ತಿಯನ್ನು ದಾನ ಮಾಡಿದವರು ಡಿ.ದೇವರಾಜ ಅರಸು. ಹಿಂದುಳಿದ ಜಾತಿಗಳು ರಾಜಕೀಯವಾಗಿ ಬಲಹೀನವಾಗಿದ್ದು, ಜಾತಿಗಳ ಹೆಸರಲ್ಲಿ ಒಡೆದುಹೋಗಿವೆ. ಇವುಗಳನ್ನು ಒಗ್ಗೂಡಿಸುವುದು ಕಷ್ಟದ ಕೆಲಸ. ಆದರೆ ಒಡೆಯುವುದು ಸುಲಭದ ಮಾತಾಗಿದೆ. ಇಂತಹ ಸಂದರ್ಭದಲ್ಲಿ ಹಿಂದುಳಿದ ಸಮಾಜಗಳು ಡಿ.ದೇವರಾಜ ಅವರ ಹೆಸರಲ್ಲಿ ಸಂಘಟಿತವಾಗುತ್ತಿರುವುದು ಉತ್ತಮ ಬೆಳವಣಿಗೆ. ಜಾತಿ ಸಂಘಟನೆಗಳನ್ನು ಮಾಡಬೇಡಿ ಎಂದು ಹೇಳುವುದಿಲ್ಲ. ಆದರೆ, ಕೇವಲ ಜಾತಿ ಸಂಘಟನೆಯಿಂದಲೇ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ. ಸಣ್ಣ ಸಣ್ಣ ಸಮುದಾಯಗಳು ಕಳೆದುಹೋಗುತ್ತಿರುವುದರಿಂದ ರಾಜಕೀಯ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ. ಒಂದು ಸಮುದಾಯದ ಒಬ್ಬರು ಮಾತ್ರ ಗುರುತಿಸಿಕೊಳ್ಳಲು ಸಾಧ್ಯವಾಗತ್ತದೆಯೇ ವಿನಃ ಇಡೀ ಸಮುದಾಯ ಮುನ್ನೆಲೆಗೆ ಬರಬೇಕಾದರೆ ಎಲ್ಲ ಹಿಂದುಳಿದ ಸಮಾಜಗಳು ಒಗ್ಗೂಡಬೇಕು ಎಂದು ಸಲಹೆ ನೀಡಿದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಸಮಾಜಮುಖೀ ಜನವರ್ಗವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಕ್ತದಾನಿಗಳಿಗೆ ಹೀರೋ ಆಫ್ ಸೊಸೈಟಿ ಪುರಸ್ಕಾರವನ್ನು ನೀಡಲಾಗುತ್ತಿದೆ. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಜನಸಾಮಾನ್ಯರ ಬದುಕು ಯಾಂತ್ರಿಕ ಮತ್ತು ಖಾಸಗೀಮಯವಾಗುತ್ತಿದ್ದು, ಇದನ್ನು ಹೋಗಲಾಡಿಸಿ ಎಲ್ಲರನ್ನೂ ಸಾಮಾಜಿಕ ಬದ್ಧತೆಯನ್ನು ಉಂಟುಮಾಡಬೇಕಾದ ಅಗತ್ಯತೆ ಇದೆ ಎಂದು ಹೇಳಿದರು.

ಪ್ರಗತಿಪರ ಚಿಂತಕ ಪ್ರೊ.ಹುಲ್ಕೆರೆ ಮಹದೇವು ಅಧ್ಯಕ್ಷತೆ ವಹಿಸಿದ್ದರು. ಕೆ.ಆರ್.ಪೇಟೆ ಕ್ಷೇತ್ರದ ಜಿ.ಪಂ ಮಾಜಿ ಸದಸ್ಯ ಬಿ.ನಾಗೇಂದ್ರಕುಮಾರ್ ರಕ್ತದಾನಿಗಳಿಗೆ ಪ್ರಶಸ್ತಿ ವಿತರಿಸಿದರು. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಡಿಜೆಸಿಎಂ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ತಿರುಮಲಾಪುರ ನಾರಾಯಣ್, ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್, ಮೈಸೂರಿನ ಡಾ. ರಾಜ್‌ಕುಮಾರ್ ಫಿಲಂ ಇನ್‌ಸ್ಟಿಟ್ಯೂಟ್ ನಿರ್ದೇಶಕ ನಟರಾಜ್ ಶಿವು, ಜಿಲ್ಲಾ ಕುಂಬಾರರ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಕೃಷ್ಣ ಇತರರಿದ್ದರು.

ಇದೇ ವೇಳೆ ರಕ್ತದಾನಿಗಳಿಗೆ ಹೀರೋ ಆಫ್ ಸೊಸೈಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 20 ಯೂನಿಟ್‌ರಕ್ತಸಂಗ್ರಹವಾಯಿತು.