ಸಿದ್ದಾಪುರ: ಪಟ್ಟಣದ ಇಂದಿರಾನಗರದ ನಿವಾಸಿ ಹಿರಿಯ ವಕೀಲ ಎನ್.ಡಿ. ನಾಯ್ಕ ಅವರ ಪುತ್ರ ಹಾಗೂ ಉಪರಾಷ್ಟ್ರಪತಿಗಳ ಕಾರ್ಯದರ್ಶಿ ರಾಜೇಶ ಎನ್. ನಾಯ್ಕ ಅವರ ಮನೆಗೆ ಉಪರಾಷ್ಟ್ರಪತಿ ಜಗದೀಪ ಧನಕರ್, ಪತ್ನಿ ಸುದೇಶ ಧನಕರ್ ಹಾಗೂ ರಾಜ್ಯಪಾಲ ಥಾವರ್ಚಂದ ಗೆಹಲೋಟ್ ಸೋಮವಾರ ಭೇಟಿ ನೀಡಿದರು.
ಇತ್ತೀಚೆಗೆ ರಾಜೇಶ ಎನ್. ನಾಯ್ಕ ಅವರ ತಾಯಿ ನಿಧನ ಹೊಂದಿದ್ದು, ಆ ಪ್ರಯುಕ್ತ ಆಯೋಜಿಸಿದ್ದ ತಾಯಿಯ ಸ್ಮರಣೆಯಲ್ಲಿ ಒಂದು ವೃಕ್ಷ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು.
ಉಪರಾಷ್ಟ್ರಪತಿಯವರು ತಮ್ಮ ತಾಯಿ ದಿ. ಕೇಸರಿ ದೇವಿ, ಅವರ ಪತ್ನಿ ಸುದೇಶ ಧನಕರ್ ಅವರ ತಾಯಿ ಭಗವತಿ ದೇವಿಯವರ ನೆನೆಪಿನಲ್ಲಿ ಒಂದೊಂದು ಮಾವಿನ ಸಸಿ ನೆಟ್ಟರು. ರಾಜ್ಯಪಾಲ ಥಾವರ್ಚಂದ ಗೆಹಲೋಟ್ ಅವರು ತಮ್ಮ ತಾಯಿ ಸುಮನಾಭಾಯಿ ನೆನಪಿನಲ್ಲಿ ಮಾವಿನ ಸಸಿ ನೆಟ್ಟರು. ನಂತರ ದಿ.ಲಕ್ಷ್ಮೀ ಎನ್. ನಾಯ್ಕ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮನೆಯವರಿಗೆ ಸಾಂತ್ವನ ಹೇಳಿದರು.
ರಾಷ್ಟ್ರಪತಿಗಳಿಗೆ ಹಾಗೂ ರಾಜ್ಯಪಾಲರಿಗೆ ರಾಜೇಶ ನಾಯ್ಕ ಕುಟುಂಬದವರು ಹಸೆ ಚಿತ್ತಾರದ ಫೋಟೋಗಳನ್ನು ನೀಡಿ ಗೌರವಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಭೀಮಣ್ಣ ನಾಯ್ಕ, ಆರ್.ಎಂ. ಹೆಗಡೆ ಬಾಳೇಸರ, ರವಿ ಹೆಗಡೆ ಹೂವಿನಮನೆ, ಸಾರಂಗನಜಡ್ಡು ಕಾರ್ತಿಕೇಯ ಪೀಠದ ಶ್ರೀ ಯೋಗೇಂದ್ರ ಅವಧೂತ ಸ್ವಾಮೀಜಿ, ಇತರರಿದ್ದರು.