ಜಿಲ್ಲೆ

ಹಳೇಹುಬ್ಬಳ್ಳಿ ಗಲಭೆ ಕೇಸ್ ವಾಪಸ್, ವಿಎಚ್ ಪಿಯಿಂದ ಬೃಹತ್ ಪ್ರತಿಭಟನೆ

ಹುಬ್ಬಳ್ಳಿ: ಹಳೇಹುಬ್ಬಳ್ಳಿಯಲ್ಲಿ 2022ರ ಏಪ್ರಿಲ್ ನಲ್ಲಿ ನಡೆದ ಗಲಭೆ ಪ್ರಕರಣವನ್ನು ಸರ್ಕಾರ ಹಿಂಪಡೆದಿರುವುನ್ನು ಖಂಡಿಸಿ ವಿಶ್ವ ಹಿಂದು ಪರಿಷತ್ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹಿಂದು ಪರ ಸಂಟನೆಗಳ ನೂರಾರು ಕಾರ್ಯಕರ್ತರು ಇಂಡಿಪಂಪ್ ಸರ್ಕಲ್ ನಲ್ಲಿ ಕೆಲಕಾಲ ರಸ್ತೆ ಮಧ್ಯೆ ಕುಳಿತು ಸಂಚಾರ ತಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಹಳೇಹುಬ್ಬಳ್ಳಿ ಮುಖ್ಯ ರಸ್ತೆಯ ದಿಡ್ಡಿ ಹನುಮಂತ ದೇವರ ಗುಡಿಯಿಂದ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಸರ್ಕಾರದ ನಡೆ ಖಂಡಿಸಿದರು.

ಸಿಎಂ ಸಿದ್ದರಾಮಯ್ಯ ಹಿಂದು ವಿರೋಧಿ, ಮುಸ್ಲಿಂ ತುಷ್ಟೀಕರಣಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಅರೋಪಿಸಿದರು. ಪ್ರತಿಭಟನೆ ನಂತರ ತಹಸೀಲ್ದಾರ್ ಕಲಗೌಡ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿಶ್ವ ಹಿಂದು ಪರಿಷತ್ ಧಾರವಾಡ ಜಿಲ್ಲಾ ಸಂಚಾಲಕ ಸಂಜಯ ಬಡಸ್ಕರ್, ಈ ಪ್ರಕರಣದಲ್ಲಿ ಎನ್ಐಎ ಕೂಡ ತನಿಖೆ ನಡೆಸುತ್ತಿದೆ. ಇದನ್ನು ವಾಪಸ್ ಪಡೆಯಬೇಕಾದರೆ ಕೇಂದ್ರದ ಅನುಮತಿ ಪಡೆಯಬೇಕೆನ್ನುವುದು ಸಿಎಂ, ಗೃಹ ಸಚಿವರಿಗೆ ಗೊತ್ತಿಲ್ಲವೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಪ್ರಾಂತದ ಸಂಚಾಲಕ ಅಶೋಕ ಅಣವೇಕರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗ ಹಂತಹಂತವಾಗಿ ಹಿಂದುಗಳ ಶೋಷಣೆ ನಡೆಯುತ್ತಿದೆ. ನಿತ್ಯ ಗೋವುಗಳ ಹತ್ಯೆ ಆಗುತ್ತಿದೆ, ಇದರಿಂದ ಹಿಂದುಗಳ ಭಾವನೆಗೆ ಧಕ್ಕೆ ಆಗುವುದಿಲ್ಲವೇ? ಎಂದು ಪ್ರಶ್ನಿಸಿದರು.

ಜಯತೀರ್ಥ ಕಟ್ಟಿ, ಸುಭಾಷ ಡಂಕ, ಕಾರ್ಯದರ್ಶಿ ರಘು ಯಳಕ್ಕನವರ, ಹನುಮಂತ ನಿರಂಜನ, ರಮೇಶ ಕದಮ್, ವಿಜಯ ರಸಾಗರ, ವಿವೇಕ ಮೊಕಾಶಿ, ಸುನೀಲ ಕಟ್ಟಿಮನಿ, ದಿನೇಶ ವಾಘ್ಮೋಡೆ, ಇತರರು ಪಾಲ್ಗೊಂಡಿದ್ದರು.