ಜಿಲ್ಲೆ

ದೇಶದಲ್ಲಿ 1 ಲಕ್ಷ ವಿಹಿಂಪ ಸಮಿತಿ ರಚಿಸುವ ಗುರಿ

Mangaluru - Hariprasad Rai




ಮಂಗಳೂರು : ವಿಶ್ವಹಿಂದು ಪರಿಷತ್‌ಗೆ 60 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ವಿಹಿಂಪದ 1 ಲಕ್ಷ ಸಮಿತಿಗಳನ್ನು ರಚಿಸುವ ಗುರಿ ಹೊಂದಲಾಗಿದೆ ಎಂದು ವಿಹಿಂಪ ಕೇಂದ್ರೀಯ ಸಹ ಪ್ರಧಾನ ಕಾರ್ಯದರ್ಶಿ ಸ್ಥಾನು ಮಾಲಯನ್ ತಿಳಿಸಿದ್ದಾರೆ.
ಬುಧವಾರ ನಗರದ ವಿಹಿಂಪ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಭಾರತ ಮತ್ತು ಇತರ 30 ದೇಶಗಳಲ್ಲಿ
ವಿಹಿಂಪ ಕಾರ್ಯ ನಡೆಯುತ್ತಿದೆ. ದೇಶದ 46 ಸಾವಿರ ಗ್ರಾಮಗಳಲ್ಲಿ 78 ಸಾವಿರ ಸಮಿತಿಗಳ ಮೂಲಕ ನಿರಂತರ ಹಿಂದು ಸಮಾಜದ ಉನ್ನತಿಗಾಗಿ ಕೆಲಸ ಮಾಡುತ್ತಿದೆ. ಈ ವರ್ಷ ಎಲ್ಲ ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿ ನೂರಾರು ಸೇವಾ ಕಾರ್ಯಕ್ರಮ, ಸಂಸ್ಕಾರ ಕೇಂದ್ರಗಳು ಹಾಗೂ ಸಾಮಾಜಿಕ ಕಾರ್ಯಗಳನ್ನು ಯೋಜನೆ ಮಾಡಲಾಗಿದೆ ಎಂದರು.
* ಶೌರ್ಯ ಜಾಗರಣ ರಥ ಯಾತ್ರೆ
ಬಜರಂಗದಳದ ನೇತ್ರತ್ವದಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ದೇಶದಾದ್ಯಂತ ಶೌರ್ಯ ಜಾಗರಣ ರಥ ಯಾತ್ರೆ ಹಮ್ಮಿಕೊಳ್ಳಲಾಗಿದೆ. ನಶಾ ಮುಕ್ತ ಭಾರತ ಅಭಿಯಾನವೂ ಈ ವೇಳೆ ನಡೆಯಲಿದೆ. ಕರ್ನಾಟಕದಲ್ಲಿ ಸೆ. 25 ರಂದು ಚಿತ್ರದುರ್ಗದಲ್ಲಿ ಶೌರ್ಯ ಜಾಗರಣ ರಥಯಾತ್ರೆ ಉದ್ಘಾಟನೆಗೊಳ್ಳಲಿದ್ದು, ಅ. 10ರಂದು ಉಡುಪಿಯಲ್ಲಿ ಸಮಾಪನಗೊಳ್ಳಲಿದೆ. ಪ್ರತಿ ಜಿಲ್ಲೆಯಲ್ಲಿ
ಶೋಭಾಯಾತ್ರೆ ಮತ್ತು ಸಾರ್ವಜನಿಕ ಸಭೆ ನಡೆಯಲಿದೆ. ಸಾಧು ಸಂತರು, ಧಾರ್ಮಿಕ ಮುಖಂಡರು ಒಳಗೊಂಡಂತೆ ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ಮಾಹಿತಿ ನೀಡಿದರು.
ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ವಿಹಿಂಪ ಖಂಡಿಸುತ್ತದೆ. ಕಮ್ಯುನಿಸ್ಟ್, ಕ್ರಿಶ್ಚಿಯನ ಚಿಂತನೆಯಿಂದ ಪ್ರೇರಿತರಾಗಿ ಅವರು ಈ ಹೇಳಿಕೆ ನೀಡಿದ್ದಾರೆ. ಉದಯನಿಧಿ ಹೇಳಿಕೆಯನ್ನು ಕರ್ನಾಟಕದ ಗೃಹ ಸಚಿವರು ಸಹಿತ ಕಾಂಗ್ರೆಸ್‌ನ ಕೆಲವು ನಾಯಕರು ಬೆಂಬಲಿಸಿದ್ದು ಕೂಡಾ ಖಂಡನೀಯ ಎಂದು ಸ್ಥಾನು ಮಾಲಯನ್ ಹೇಳಿದರು.
ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಮಂಗಳೂರು ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ್ ಉಪಸ್ಥಿತರಿದ್ದರು.