ಮಡಿಕೇರಿ:
ಮನೆ ಬಾಗಿಲಿಗೇ ಬಂದು ತುರ್ತು ಪಶುವೈದ್ಯಕೀಯ ಸೇವೆಗಳನ್ನು ನೀಡುವ ಸರ್ಕಾರದ ಮಹತ್ವಾಕಾಂಕ್ಷಿ ’ಸಂಚಾರಿ ಪಶು ಚಿಕಿತ್ಸಾ ಘಟಕ’ಗಳು ಕೊಡಗಿನಲ್ಲಿ ಸದ್ಯದಲ್ಲೇ ಆರಂಭವಾಗಲಿದೆ. ಈ ಸಂಬಂಧ ಜಿಲ್ಲೆಯ ೫ ತಾಲೂಕುಗಳು ಮತ್ತು ಪಾಲಿಕ್ಲಿನಿಕ್‌ಗಳಿಗೆ ಈಗಾಗಲೇ ಸುಸಜ್ಜಿತ ವಾಹನಗಳು ಬಂದಿವೆ. ೨ ತಾಲೂಕುಗಳಿಗೆ ವೈದ್ಯಕೀಯ ಸಿಬ್ಬಂದಿ ನೇಮಕವೂ ಆಗಿದೆ. ಇನ್ನುಳಿದ ೩ ತಾಲೂಕುಗಳಿಗೆ ಅಗತ್ಯ ನೇಮಕಾತಿ ನಡೆಯುತ್ತಿದ್ದಂತೆಯೇ ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಅವರೇ ಖುದ್ದು ಈ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. ಗ್ರಾಮೀಣ ಪ್ರದೇಶಗಳಿಗೆ ಇದರಿಂದ ಹೆಚ್ಚಿನ ಅನುಕೂಲ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.
ರಾಜ್ಯ ಸರ್ಕಾರದ ಅನುದಾನದಲ್ಲಿ ತಾಲೂಕು ಪಶು ಆಸ್ಪತ್ರೆಗಳಲ್ಲಿ ಒಟ್ಟು ೧೭೬ ಸಂಚಾರಿ ಪಶು ಚಿಕಿತ್ಸಾ ಕೇಂದ್ರಗಳು ಕಾರ್ಯಾಚರಿಸುತ್ತಿದ್ದು ಕೊಡಗಿನಲ್ಲೂ ೩ ಸಂಚಾರಿ ಪಶು ಚಿಕಿತ್ಸಾ ಕೇಂದ್ರಗಳ ಸೇವೆ ಲಭ್ಯವಾಗುತ್ತಿದೆ. ಈ ಸಂಚಾರಿ ಪಶುಚಿಕಿತ್ಸಾ ವಾಹನಗಳು ವಾರದಲ್ಲಿ ೩-೪ ದಿನ ನಿಗದಿತ ಮಾರ್ಗದ ಹಳ್ಳಿಗಳಲ್ಲಿ ಸಂಚರಿಸಿ ರೈತರಿಗೆ ಸೇವೆಗಳನ್ನು ನೀಡುತ್ತಿದೆ. ಇದೀಗ ೨೦೨೧-೨೨ನೇ ಸಾಲಿನಲ್ಲಿ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿ ಬರುವ ಎಸ್ಟಾಬ್ಲಿಷ್‌ಮೆಂಟ್ ಆಂಡ್ ಸ್ಟ್ರೆಂಥನಿಂಗ್ ಆಫ್ ವೆಟರ್ನೆರಿ ಹಾಸ್ಪಿಟಲ್ಸ್ ಆಂಡ್ ಡಿಸ್‌ಪೆಸರೀಸ್ (ಇಎಸ್‌ವಿಹೆಚ್‌ಡಿ) ಯೋಜನೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಒಟ್ಟು ೨೯೦ ಸಂಚಾರಿ ಪಶುಚಿಕಿತ್ಸಾ ಘಟಕ ವಾಹನಗಳನ್ನು ಮಂಜೂರು ಮಾಡಿದೆ. ಜಾನುವಾರುಗಳಿಗೆ ಅಗತ್ಯವಿರುವ ತುರ್ತು ಪಶುವೈದ್ಯಕೀಯ ಸೇವೆಗಳನ್ನು ಒದಗಿಸುವ ಉದ್ದೇಶಕ್ಕೆ ಈ ವಾಹನಗಳನ್ನು ರಾಜ್ಯದ ಎಲ್ಲಾ ತಾಲೂಕುಗಳಿಗೆ ನೀಡಲಾಗಿದ್ದು ಜಿಲ್ಲೆಗೂ ೬ ವಾಹನಗಳು ಬಂದಿವೆ.
ಸಹಾಯವಾಣಿ ಸಂಖ್ಯೆ ೧೯೬೨ ಬಳಸಿಕೊಂಡು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಈ ಸಂಚಾರಿ ಪಶು ಚಿಕಿತ್ಸಾ ಘಟಕ ಕಾರ್ಯ ನಿರ್ವಹಿಸಲಿದೆ. ಜಾನುವಾರುಗಳಿಗೆ ಅಗತ್ಯವಿರುವ ತುರ್ತು ಪಶು ವೈದ್ಯಕೀಯ ಚಿಕಿತ್ಸೆಗಳನ್ನು ನೀಡಲವೀ ವಾಹನಗಳನ್ನು ಉಪಯೋಗಿಸಿಕೊಳ್ಳುವ ಅವಕಾಶವಿದೆ. ತಮ್ಮ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ಅಗತ್ಯವಿರುವ ಜಾನುವಾರುಗಳ ಮಾಲೀಕರು ಅಥವಾ ರೈತರು ಸಹಾಯವಾಣಿಗೆ ಕರೆ ಮಾಡಿದಾಗ ಅಲ್ಲಿ ಕಾರ್ಯನಿರ್ವಹಿಸುವ ಪಶುವೈದ್ಯರು ಚಿಕಿತ್ಸೆಯ ಗಂಭೀರತೆ ಆಧಾರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಸಂಚಾರಿ ಪಶು ಚಿಕಿತ್ಸಾ ಘಟಕಗಳು ಮೂಲಕ ತುರ್ತು ಪಶುವೈದ್ಯಕೀಯ ಸೇವೆಗಳನ್ನು ನೀಡುವ ಉದ್ದೇಶ ಹೊಂದಲಾಗಿದೆ. ಕೃತಕ ಗರ್ಭಧಾರಣೆ ಮತ್ತು ಜಾನುವಾರುಗಳಲ್ಲಿ ಗರ್ಭಕೋಶದ ಸಮಸ್ಯೆಗಳಾದ ಕಷ್ಟಕರವಾದ ಹೆರಿಗೆ ಮತ್ತು ಸತ್ತೆ ಬೀಳದಿರುವುದು, ಜಠರ, ಕರುಳಿನ ತುರ್ತು ಸಂದರ್ಭಗಳಾದ ಹೊಟ್ಟೆ ಊತ, ವಿಷ ಆಹಾರ ಅಥವಾ ಸಸ್ಯ ಸೇವನೆ, ಹಾಲು ಜ್ವರ, ಹಾವು ಕಡಿತ, ಕೆಚ್ಚಲುಬಾವು ಮತ್ತು ಜ್ವರದ ಸಮಸ್ಯೆ, ಸೂಕ್ಷ್ಮಾಣು ಪರೋಪಕಾರಿ ಜೀವಿಗಳಿಂದಾಗುವ ರೋಗಗಳಾದ ಅನಪ್ಲಾಸ್ಕೋಸಿಸ್, ಬೆಬಿಶಿಯಾ, ಥೈಲೇರಿಯಾ ಚಿಕಿತ್ಸೆ, ಅಪಘಾತಗಳು ಮತ್ತು ಮೂಳೆ ಮುರಿಯುವಿಕೆ, ಲಸಿಕಾ ಅಭಿಯಾನ ಸಮಯದಲ್ಲಿ ಸಹಾಯ ಮಾಡುವುದು, ಪಶುಪಾಲನಾ ಇಲಾಖಾ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮತ್ತು ’೧೯೬೨’ ಕಾಲ್ ಸೆಂಟರ್‌ನ ತುರ್ತು ಪಶುವೈದ್ಯಾಧಿಕಾರಿ ನಿರ್ಧಾರ ಅವಲಂಭಿಸಿ ಇತರ ಚಿಕಿತ್ಸೆಗಳನ್ನು ನೀಡಲು ಸಂಚಾರಿ ಪಶು ಚಿಕಿತ್ಸಾ ಘಟಕಗಳನ್ನು ಬಳಸಿಕೊಳ್ಳಲಾಗುವುದು.
ಸಂಚಾರಿ ಪಶು ಚಿಕಿತ್ಸಾ ಘಟಕ ವಾಹನಗಳನ್ನು ಖರೀದಿಸಲು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದ ಅನುದಾನ ಕೊಟ್ಟಿದೆ. ವೈದ್ಯರು ಮತ್ತು ಸಿಬ್ಬಂದಿ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಬೇಕಿದೆ. ಪ್ರತಿ ವಾಹನಕ್ಕೂ ೧೬ ಲಕ್ಷ ರೂ.ಗಳಂತೆ ವ್ಯಯಿಸಲಾಗಿದೆ. ಸಂಚಾರಿ ಪಶು ಚಿಕಿತ್ಸಾ ಘಟಕ ವಾಹನದಲ್ಲೂ ಒಬ್ಬ ವೈದ್ಯ, ಒಬ್ಬ ಪ್ಯಾರಾಮೆಡಿಕಲ್ ಸಿಬ್ಬಂದಿ, ಒಬ್ಬ ತಂತ್ರಜ್ಞ ಹಾಗೂ ಒಬ್ಬ ಡ್ರೈವರ್ ಮತ್ತು ಡಿ ಗ್ರೂಪ್ ಸಿಬ್ಬಂದಿ ಇರುತ್ತಾರೆ. ಜಿಲ್ಲೆಯಲ್ಲಿ ಈಗಾಗಲೇ ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲೂಕುಗಳಲ್ಲಿ ಸಂಚಾರಿ ಪಶುವೈದ್ಯಕೀಯ ಸೇವೆ ಕಾರ್ಯಾಚರಿಸುತ್ತಿದೆ. ಈ ಮೂರು ತಾಲೂಕುಗಳ ಜತೆಗೆ ಕುಶಾಲನಗರ ಮತ್ತು ಪೊನ್ನಂಪೇಟೆ ತಾಲೂಕುಗಳಲ್ಲೂ ಹೊಸದಾಗಿ ಸಂಚಾರಿ ಪಶು ಚಿಕಿತ್ಸಾ ಘಟಕ ವಾಹನಗಳ ಸೇವೆ ಲಭ್ಯವಾಗಲಿದ್ದು, ಎಲ್ಲಾ ೫ ತಾಲೂಕುಗಳಲ್ಲೂ ಸಂಚಾರಿ ಪಶು ಚಿಕಿತ್ಸಾ ಘಟಕ ಕಾರ್ಯಾರಂಭ ಮಾಡಲಿದೆ. ಈ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಆರಂಭಿಸುತ್ತಿದ್ದಂತೆಯೇ ಸಂಚಾರಿ ಪಶುವೈದ್ಯಕೀಯ ಸೇವೆ ಸ್ಥಗಿತಗೊಳ್ಳಲಿದೆ.