ಮಂಗಳೂರು: ಮಂಗಳೂರು ಮಹಾನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ಗುರುವಾರ ನೀರಿನ ಮಟ್ಟ 4.28 ಮೀಟರ್‌ಗೆ ಇಳಿಕೆಯಾಗಿದೆ. ಬುಧವಾರ ನೀರಿನ ಮಟ್ಟ 4.38 ಮೀಟರ್ ಇತ್ತು. ಎಎಂಆರ್ ಡ್ಯಾಂನ ನೀರಿನ ಮಟ್ಟ ಕೂಡ 15.96 ಮೀಟರ್ ಇದ್ದುದು 15.89 ಮೀಟರ್‌ಗೆ ಕುಸಿದಿದೆ.
ಹರೇಕಳ ಡ್ಯಾಂನಿಂದ ತುಂಬೆ ಡ್ಯಾಂಗೆ ನೀರು ಪಂಪಿಂಗ್ ಮುಂದುವರಿದಿದೆ. ತುಂಬೆ ಡ್ಯಾಂನಲ್ಲಿ ವೇಗವಾಗಿ ನೀರು ಇಳಿಕೆಯಾಗಿದೆ. ಮಹಾನಗರ ನೀರು ಪೂರೈಕೆಗೆ ಸಂಬಂಧಿಸಿ ಸಭೆ ನಡೆಸಬೇಕಾಗಿದೆ. ನೀರಿನ ಸಮಸ್ಯೆ ಹೋಗಲಾಡಿಸುವ ಬಗ್ಗೆಯೂ ತೀರ್ಮಾನ ಕೈಗೊಳ್ಳಬೇಕಾಗಿದೆ. ಆದರೆ ನೀತಿಸಂಹಿತೆ ಕಾರಣಕ್ಕೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.
*ಪಾಲಿಕೆಯಿಂದ ನೀರಿನ ರೇಷನಿಂಗ್ ಸುಳಿವು
ಕಳೆದ 1 ವಾರದಿಂದ ಈ ಡ್ಯಾಂಗಳಲ್ಲಿ ಸರಾಸರಿ 0.10 ಮೀ. ನೀರು ಇಳಿಕೆಯಾಗುತ್ತಿದ್ದರೂ ತುಂಬೆಯಿಂದ ಪ್ರತೀ ದಿನ 155 ಎಂಎಲ್‌ಡಿ ನೀರು ಲಿಫ್ಟ್ ಮಾಡಿ ಕುಡಿಯುವ ನೀರಿನ ಪೂರೈಕೆ ನಿರಂತರ ನಡೆಯುತ್ತಿದೆ. ಸಧ್ಯಕ್ಕೆ ಇಲ್ಲಿರುವ ನೀರು ಮುಂದಿನ 25 ದಿನಕ್ಕೆ ಮಾತ್ರ ಪೂರೈಸಬಹುದಾಗಿರುವುದರಿಂದ ಮಂಗಳೂರು ಪಾಲಿಕೆಯಿಂದ ನೀರಿನ ರೇಷನಿಂಗ್ ಸುಳಿವು ನೀಡಿದೆ. ನಗರ ಹಾಗೂ ನಗರದ ಹೊರವಲಯದಲ್ಲಿ ನೀರಿನ ಕೊರತೆಯಿರುವಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.
ಟ್ಯಾಂಕರ್ ಮೂಲಕ ನೀರು ಪೂರೈಕೆ
ಪಾಲಿಕೆ ವ್ಯಾಪ್ತಿಯ ಸುರತ್ಕಲ್, ಪಾಂಡೇಶ್ವರ ಸಹಿತ ಪೈಪ್‌ಲೈನ್ ನಿಂದ ನೀರು ತಲುಪದ ಕೆಲವು ಪ್ರದೇಶಗಳಿಗೆ ಪ್ರತಿನಿತ್ಯ ಸುಮಾರು 70 ಟ್ಯಾಂಕರ್ (7 ಟ್ಯಾಂಕರ್‌ಗಳಲ್ಲಿ ಟ್ರಿಪ್‌ಗಳಲ್ಲಿ ) ನೀರು ಪಾಲಿಕೆಯಿಂದ ಪೂರೈಕೆಯಾಗುತ್ತಿದೆ. ಗ್ರಾಮೀಣ ಭಾಗದ ತೊಕ್ಕೊಟ್ಟು, ಬಾಳೆಪುಣಿ, ಕೊಣಾಜೆ, ನರಿಂಗಾನ, ಪಜೀರು, ಮಂಜನಾಡಿ, ಇನೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, 9 ಟ್ಯಾಂಕರ್‌ಗಳ ಮೂಲಕ ದಿನಕ್ಕೆ 30 ಟ್ರಿಪ್ ಸಹಿತ 20 ಹೆಚ್ಚುವರಿ ನೀರು ಪೂರೈಕೆಯಾಗುತ್ತಿದೆ. ಉಳ್ಳಾಲ, ಕೋಟೆಕಾರು, ಸೋಮೇಶ್ವರ ಸೇರಿ ನಗರ ಭಾಗದ 12 ವಾರ್ಡ್‌ಗಳಿಗೆ 10 ಟ್ಯಾಂಕರ್‌ಗಳ ಮೂಲಕ 62 ಟ್ರಿಪ್ ನೀರು ಪೂರೈಕೆ ಮಾಡಲಾಗುತ್ತಿದೆ.
ಕಂಟ್ರೋಲ್ ರೂಂ ಕರೆಗಳ ಹೆಚ್ಚಳ
ಮಂಗಳೂರು ಪಾಲಿಕೆ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಕಂಟ್ರೋಲ್ ರೂಂ (0824- 2220306 ಅಥವಾ 0824- 2220303) ಗೆ ಕರೆ ಮಾಡಿದರೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪಾಲಿಕೆ ತಿಳಿಸಿದೆ. ಕಳೆದ 1 ವಾರದಿಂದ ನೀರಿಗಾಗಿ ಆಗ್ರಹಿಸಿ ಕಂಟ್ರೋಲ್ ರೂಂ ಕರೆಗಳ ಹೆಚ್ಚಳವಾಗಿದೆ.
------------------------
ತುಂಬೆ ಹಾಗೂ ಎಎಂಆರ್ ಡ್ಯಾಂನಲ್ಲಿ ನೀರಿನ ಮಟ್ಟ ಕುಸಿತವಾಗುತ್ತಿದ್ದರೂ ಮಂಗಳೂರು ನಗರದ ನೀರಿನ ಪೂರೈಕೆಯಲ್ಲಿ ತೊಂದರೆಯಾಗದಂತೆ ನಿಗಾ ವಹಿಸಲಾಗಿದೆ. ಅನಿವಾರ್ಯವಾದರೆ ಪಾಲಿಕೆಯಿಂದ ಟ್ಯಾಂಕರ್ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ತುಂಬೆ ಡ್ಯಾಂ ನೀರಿನ ಮಟ್ಟ ಯಥಾ ಸ್ಥಿತಿ ಕಾಯ್ದುಕೊಳ್ಳಲು ಶೇ.30ರಷ್ಟು ನೀರನ್ನು ತುಂಬೆ ಡ್ಯಾಂನ ಕೆಳಭಾಗದಿಂದ ನಿರಂತರ ಪಂಪಿಂಗ್ ಮಾಡಲಾಗುತ್ತಿದೆ.
ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರು ಮೇಯರ್