ಅರಸೀಕೆರೆ : ಹನ್ನೆರಡನೇ ಶತಮಾನದ ವಚನಗಳ ಮಹತ್ವ ಅರಿತು ನಡೆದರೆ ಬದುಕು ಪರಿಪೂರ್ಣವಾಗಲಿದೆ ಎಂದು ನಗರಸಭೆ ಸದಸ್ಯೆ ಶ್ವೇತಾ ರಮೇಶ್ ಹೇಳಿದರು. ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ನಗರದ ಬಸವೇಶ್ವರ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀ ಶಿವಲಿಂಗೇಶ್ವರ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎನ್ನುವ ವಚನದ ಸಾಲುಗಳು ಮನಷ್ಯನ ವ್ಯಕ್ತಿತ್ವ ಹೇಗಿರಬೇಕು ಎನ್ನುವ ಸಂದೇಶ ನೀಡಿವೆ. ಆದರೆ ಪ್ರಸಕ್ತ ದಿನಮಾನಗಳಲ್ಲಿ ಸುಳ್ಳು, ವಂಚನೆ, ದರೋಡೆ, ಕೊಲೆ, ಸುಲಿಗೆಯಂತಹ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ವಿದ್ಯಾರ್ಥಿಗಳು ನೈತಿಕ ಗುಣ ಬೆಳೆಸಿಕೊಳ್ಳಲು ವಚನಗಳು ದಾರಿದೀಪವಾಗಿದ್ದು ಉದಾತ್ತ ಚಿಂತನೆ ಮೈಗೂಡಿಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಬಿ.ಪರಮೇಶ್ ಮಾತನಾಡಿ, ಶರಣರ ಧರ್ಮಪ್ರಸಾರ, ಶರಣರು ಮತ್ತು ಧಾರ್ಮಿಕ ಚಿಂತನೆ ಕುರಿತು ದತ್ತಿ ಉಪನ್ಯಾಸ ನೀಡಿ, ವಚನಗಳು ಮನುಕುಲಕ್ಕೆ ನೈತಿಕತೆ ಬೋಧಿಸುವ ಉನಿಷತ್ತುಗಳಾಗಿವೆ. ಹನ್ನೆರಡನೇ ಶತಮಾನದ ಬಸವಾದಿ ಶಿವಶರಣರು ಕಾಯಕ, ದಾಸೋಹಕ್ಕೆ ಹಚ್ಚಿನ ಒತ್ತು ನೀಡಿದ್ದರು. ಅನುಭವ ಮಂಟಪ ಸ್ಥಾಪಿಸುವ ಮೂಲಕ ಸರ್ವ ಜನಾಂಗವನ್ನು ಸಮಾನತೆಯ ದೃಷ್ಟಿಕೋನದಲ್ಲಿ ಕಾಣುವ ಮೂಲಕ ಆಧುನಿಕ ಸಂಸತ್ತಿನ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದಾರೆ. ಅಕ್ಕಮಹಾದೇವಿ, ಅಲ್ಲಮಪ್ರಭು, ಸಂಕವ್ವೆ, ಆಯ್ದಕ್ಕಿ ಲಕ್ಕಮ್ಮ ಸೇರಿದಂತೆ ನೂರಾರು ವಚನಕಾರರ ಸಹಸ್ರಾರು ವಚನಗಳು ಜನಮನದ ಕತ್ತಲೆ ಕಳೆಯುವ ಕೆಲಸ ಮಾಡಿವೆ. ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ಗುರು, ಹಿರಿಯರ ಅನುಭವವಾಣಿಯನ್ನು ಅರ್ಥಮಾಡಿಕೊಂಡಲ್ಲಿ ಭವಿಷ್ಯ ಉಜ್ವಲವಾಗಲಿವೆ. ಅರಿವೆ, ಅಕ್ಷರ, ಅನ್ನ, ಅರಿವು ಬಾಳಿನ ಬೆಳಕಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ವಚನಕಾರರ ಸಂದೇಶ ಪಾಲಿಸೋಣ ಎಂದು ವಚನಗಳ ಮಹತ್ವ ವಿವರಿಸುತ್ತಾ ಉಪನ್ಯಾಸ ನೀಡಿದರು.
ಮುಖ್ಯಶಿಕ್ಷಕ ಎಂ.ವಿ.ಸುರೇಶ್, ಸುಕ್ಷೇತ್ರ ಕೋಡಿಮಠದ ಶ್ರೀ ಶಿವಲಿಂಗೇಶ್ವರ ಶ್ರೀಗಳ ದತ್ತಿ ಹೆಸರಿನಲ್ಲಿ ಸುತ್ತೂರು ಶ್ರೀಮಠ ನಿರಂತರ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕಲಿಕೆಯ ಅವಧಿಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಅಂಟಿಕೊಳ್ಳದೆ ಮುಂದೆ ಸಾಗಿದರೆ ನಿಶ್ಚಿತವಾಗಿಯೂ ಯಶಸ್ಸು ಪಡೆಯಬಹುದು ಎಂದು ಕಿವಿಮಾತು ಹೇಳಿದರು.
ಪರಿಷತ್ತಿನ ತಾಲೂಕು ಅಧ್ಯಕ್ಷ ಶೇಖರ್ ಸಂಕೋಡನಹಳ್ಳಿ ವಚನಕಾರರ ಅಂಕಿತಗಳ ಕುರಿತು ಪ್ರಶ್ನೆಕೇಳಿ ವಿಜೇತರಿಗೆ ಬಹುಮಾನ ವಿತರಿಸಿದರು.ಪ್ರಾಧ್ಯಾಪಕ ಡಾ.ಹರೀಶ್ ಕುಮಾರ್, ವೀರಶೈವ ಲಿಂಗಾಯತ ಸಮಾಜದ ಮುಖಂಡ ಮೋಹನ್ ಕುಮಾರ್, ದೈಹಿಕ ಶಿಕ್ಷಕ ಪ್ರಸನ್ನಕುಮಾರ್ ,ಶಿಕ್ಷಕಿ ಧರ್ಮಬಾಯಿ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.