ಜಿಲ್ಲೆ

ವಾರಣಾಸಿ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ

ರಾಯಚೂರು: ಕಾಶಿಯಲ್ಲಿ ದೇವಸ್ಥಾನ ಒಡೆದು ಮಸೀದಿ ನಿರ್ಮಾಣಕ್ಕೆ ಸಂಬಂಸಿದಂತೆ ವಾರಣಾಸಿ ನ್ಯಾಯಾಲಯ ಬುಧವಾರ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದ್ದು, ಜೈಶ್ರೀರಾಮ ಘೋಷಣೆ ಜತೆಗೆ ಈಗ ಹರಹರ ಮಹಾದೇವ ಹೇಳುವಂತಹ ಅವಕಾಶವನ್ನು ನ್ಯಾಯಾಲಯ ನೀಡಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಸಂಜೆ ಮಾತನಾಡಿ, ಮಸೀದಿ ನೆಲಮಾಳಗಿಯಲ್ಲಿ 10 ಹಿಂದೂ ದೇವರ ಮೂರ್ತಿ ದೊರೆತಿರುವುದು ಹಾಗೂ ಪ್ರಾಚ್ಯವಸ್ತು ಇಲಾಖೆ ನೀಡಿದ 800 ಪುಟಗಳ ವರದಿ ಆಧರಿಸಿ ನ್ಯಾಯಾಲಯ ತೀರ್ಪು ನೀಡಿದೆ ಎಂದರು.
ತೀರ್ಪು ವಿರೋಸಿ ಮುಸ್ಲಿಂ ಪರ ವಕೀಲರು ಹೈಕೋಟ್‌ಗೆ ಹೋಗುತ್ತಾರೆ ಎನ್ನುವುದರಲ್ಲಿ ತಪ್ಪೇನಿಲ್ಲ. ಅವರು ಹೈಕೋರ್ಟ್ ಇಲ್ಲವೇ ಸುಪ್ರೀಂ ಕೋರ್ಟ್‌ಗೆ ಹೋಗಿ ಕಾನೂನು ಬದ್ಧವಾಗಿ ಹೋರಾಟ ಮಾಡಿದರೆ ಯಾವುದೇ ಸಮಸ್ಯೆ ಬರುವುದಿಲ್ಲ.
ದೇವಸ್ಥಾನದಲ್ಲಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಕಾಂಗ್ರೆಸ್‌ನವರು ಅಯೋಧ್ಯೆ ರಾಮ ಮಂದಿರವನ್ನು ಬಿಜೆಪಿಯ ರಾಮಮಂದಿರ ಎಂದು ಕರೆಯುತ್ತಿರುವುದು ಸಭ್ಯತೆಯಲ್ಲ. ಕಾಶಿ ವಿಶ್ವನಾಥ ದೇವಸ್ಥಾನ ವಿಚಾರದಲ್ಲಿಯೂ ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು.
ಕಾಂಗ್ರೆಸ್‌ನವರಿಗೆ ರಾಮ, ಹನುಮನ ಕನಸು ಬೀಳುತ್ತೇನೋ ಗೊತ್ತಾಗುತ್ತಿಲ್ಲ. ಕೆರಗೋಡಿನಲ್ಲಿ ರಾಷ್ಟ್ರಧ್ವಜವನ್ನು ಯಾವಾಗಬೇಕು ಆವಾಗ ಹಾರಿಸಲಾಗುತ್ತದಾ. ಇಂದು ಹಿಂದು ಮುಸ್ಲಿಂ ಸಮುದಾಯದ ಜನರ ನಡುವೆ ಒಡಕು ಉಂಟು ಮಾಡುವ ಕುತಂತ್ರವಾಗಿದೆ.
ಲಕ್ಷ್ಮಣ ಸವದಿ ಬಿಜೆಪಿಗೆ ಬರುವ ವಿಚಾರವಿರಲಿ, ನಾಳೆ ಸಿದ್ದರಾಮಯ್ಯ ಬಿಜೆಪಿಗೆ ಬಂದರೂ ಯಾವುದೇ ಅಚ್ಚರಿ ಪಡಬೇಕಾಗಿಲ್ಲ. ಪಕ್ಷದ ಎಲ್ಲ ಅಕಾರವನ್ನು ನೀಡಿದೆ. ಬಿಜೆಪಿ ಕಾರ್ಯಕರ್ತ ಅನ್ನೋ ಪದ ಯಾರೂ ಕಿತ್ತಿಕೊಳ್ಳಲು ಆಗಲ್ಲ. ಬಿಜೆಪಿ ನನ್ನ ತಾಯಿ ಪಕ್ಷ. ಅದಕ್ಕೆ ಮೋಸ ಮಾಡೊಲ್ಲ.
ಸಿರವಾರದಲ್ಲಿ ಟಿಪ್ಪು ನಾಮಲಕಕ್ಕೆ ಚಪ್ಪಲಿ ಹಾರ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಈ ಹಿಂದೆ ಶಿವಮೊಗ್ಗದಲ್ಲಿ ನಡುರಸ್ತೆಯಲ್ಲಿ ಖಡ್ಗ ಹಾಕಿದ್ದಕ್ಕೆ ಹೋಗಲಿ ಬಿಡಿ ಸಣ್ಣ ವಿಚಾರ ಎಂದು ಗೃಹ ಸಚಿವ ಪರಮೇಶ್ವರ ಹೇಳಿದ್ದರು ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಬಂಡೇಶ ವಲ್ಕಂದಿನ್ನಿ, ಗಿರೀಶ ಕನಕವೀಡು, ರಾಮಚಂದ್ರ ಕಡಗೋಲ ಉಪಸ್ಥಿತರಿದ್ದರು.