ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾನುವಾರ ಭದ್ರ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿದರು. ಸಚಿವ ಮಧು ಬಂಗಾರಪ್ಪ, ಶಾಸಕ ಬಿ.ಕೆ. ಸಂಗಮೇಶ್ವರ ಇದ್ದರು. 
ಜಿಲ್ಲೆ

ಅಂಗನವಾಡಿಗಳ ಮೇಲ್ದರ್ಜೆಗೇರಿಸಲು ಮೌಖಿಕ ಒಪ್ಪಿಗೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಶಿವಮೊಗ್ಗ: ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿಗಳ ಸಭೆಯಲ್ಲಿ ಮೌಖಿಕ ಒಪ್ಪಿಗೆ ಸಿಕ್ಕಿದೆ. ರಾಜ್ಯದಲ್ಲಿ 17,800 ಅಂಗನವಾಡಿಗಳಿದ್ದು ಎಲ್‌ಕೆಜಿ, ಯುಕೆಜಿ ಮಟ್ಟದಲ್ಲಿ ಗುಣಮಟ್ಟದ ವಿದ್ಯಾಭ್ಯಾಸ ಸೇರಿ ಮೂಲಭೂತ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಬಿಆರ್‌ಪಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಗನವಾಡಿಗಳನ್ನು ಮೇಲ್ದರ್ಜೆಗೆ ಕೇಂದ್ರದ ಸಹಕಾರ ಕೋರಲಾಗಿತ್ತು. ನಮ್ಮ ಯೋಜನೆಗೆ ಕೇಂದ್ರ ಸಚಿವೆ ಅನ್ನಪೂರ್ಣಾ ಅವರು ಮೆಚ್ಚುಗೆ ವ್ಯಕ್ತಪಡಿಸಿ ಸಕ್ಷಮ್ ಹೆಸರಿನಲ್ಲಿ 120 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅದನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ಮಕ್ಕಳ ಕಲಿಕೆಗೆ ಒತ್ತು ನೀಡುವ ಉದ್ದೇಶದಿಂದ ಪದವಿ ಪಡೆದವರನ್ನೂ ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಈಗಾಗಲೇ ಒಂದು ತಿಂಗಳ ಗೃಹಲಕ್ಷ್ಮೀ ಹಣ ಬ್ಯಾಂಕ್ ಮೂಲಕ ವರ್ಗಾವಣೆಯಾಗಿದೆ. ಮೂರು ಸಾವಿರ ಕೋಟಿ ರೂ. ನಷ್ಟು ಗೃಹಲಕ್ಷ್ಮೀ ಯೋಜನೆ ಹಣ ವರ್ಗಾವಣೆ ಆಗಬೇಕಾದರೆ ಹದಿನೈದು ದಿನಗಳ ಸಮಯ ತೆಗೆದುಕೊಳ್ಳುತ್ತದೆ. ಪ್ರತಿ ತಿಂಗಳು 15ನೇ ತಾರೀಕಿನಂದು ಹಣ ವರ್ಗಾವಣೆ ಕೆಲಸ ಆರಂಭವಾಗುತ್ತದೆ. ಅದು ತಿಂಗಳ ಕೊನೆ ವಾರದಲ್ಲಿ ಖಾತೆಗೆ ಜಮಾ ಆಗುತ್ತದೆ ಎಂದು ತಿಳಿಸಿದರು.