ಹಿರೇಹಡಗಲಿ ಗ್ರಾಮದ ತೋಟವೊಂದರಲ್ಲಿ ಬೆಳೆದ ಚೆಂಡು ಹೂಗಳನ್ನು ಮಹಿಳೆಯರು ಕೀಳುತ್ತಿರುವುದು. 
ಜಿಲ್ಲೆ

ಮಲ್ಲಿಗೆ ನಾಡಿನಲ್ಲಿ ಚೆಂಡು ಹೂವಿನ ಪರಿಮಳ

ಹೂವಿನಹಡಗಲಿ: ಮಲ್ಲಿಗೆ ನಾಡು ಎಂಬ ಹೆಸರು ಪಡೆದ ತಾಲೂಕಿನಲ್ಲಿ ಈಗ ಚೆಂಡು ಹೂವಿನ ಬೆಳೆ ಹೆಚ್ಚಾಗಿ ಕಾಣುತ್ತಿದೆ. 200ಕ್ಕೂ ಹೆಚ್ಚು ರೈತರು 270 ಕ್ಕಿಂತ ಹೆಚ್ಚು ಎಕರೆ ಪ್ರದೇಶದಲ್ಲಿ ಚೆಂಡು ಹೂವು ಬೆಳೆದು ಲಾಭಗಳಿಸುತ್ತಿದ್ದಾರೆ.

ತಾಲೂಕಿನ ಹಿರೇಹಡಗಲಿ ಹಾಗೂ ಹೂವಿನಹಡಗಲಿ ಹೋಬಳಿ ವ್ಯಾಪ್ತಿ ನೀರಾವರಿ ಪ್ರದೇಶದಲ್ಲಿ ರೈತರು ಖಾಸಗಿ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಚೆಂಡು ಹೂವು ಬೆಳೆಯುತ್ತಿದ್ದಾರೆ. ಸಾಮಾನ್ಯವಾಗಿ ದಸರಾ ಹಾಗೂ ದೀಪಾವಳಿ ಹಬ್ಬಗಳಲ್ಲಿ ಚೆಂಡು ಹೂವು ಹಾಗೂ ಸೇವಂತಿಗೆ ಹೂಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಈ ಹಬ್ಬಗಳು ಸಮೀಪಿಸುವ ನಾಲ್ಕೈದು ತಿಂಗಳ ಮುಂಚೆಯೇ ರೈತರು ಹೂ ಬೆಳೆಯಲು ಪ್ರಾರಂಭಿಸುತ್ತಾರೆ. ನಂತರ ದೂರದ ಊರುಗಳಿಗೆ ತೆರಳಿ ಹಬ್ಬದ ಸಂದರ್ಭದಲ್ಲಿ ಮಾರಾಟ ಮಾಡುತ್ತಾರೆ. ಆದರೆ ಖಾಸಗಿ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವುದರಿಂದ ಕಂಪನಿಯವರೇ ಚೆಂಡು ಹೂವು ಬೆಳೆಯು ಸಸಿಯಾದಾಗಿನಿಂದಲೂ ಪಾಲನೆ ಹಾಗೂ ಪೋಷಣೆ ಮಾಡಲು ಹಣ ನೀಡುವುದರೊಂದಿಗೆ ಜಮೀನನ ಬಳಿಯೇ ತೂಕ ಮಾಡಿಕೊಂಡು ವಾಹನಗಳ ಮೂಲಕ ಕಾರ್ಖಾನೆಗಳಿಗೆ ತೆಗೆದುಕೊಂಡು ಹೋಗುವುದು ರೈತರಿಗೆ ಅನುಕೂಲವಾಗಿದೆ.

ದೂರದ ತಿಪಟೂರು, ಹರಪನಹಳ್ಳಿ ಹಾಗೂ ರಾಜ್ಯದ ಇತರ ಭಾಗಗಳಲ್ಲಿನ ಕಾರ್ಖಾನೆಗಳಲ್ಲಿ ಬಣ್ಣ, ಸುಗಂಧದ್ರವ್ಯ, ಔಷಧ ಸೇರಿ ಇತರ ಪದಾರ್ಥಗಳನ್ನು ತಯಾರಿಸಲು ಚೆಂಡು ಹೂವನ್ನು ಬಳಸಲಾಗುತ್ತಿದೆ. ಬೇರೆ ಬೆಳೆಗಳಿಗೆ ಹೋಲಿಸಿದರೆ ಚೆಂಡು ಹೂ ಬೆಳೆಯು ಅಧಿಕ ಲಾಭದಾಯಕವಾಗುತ್ತಿದೆ. ವರ್ಷದಲ್ಲಿ ಒಂದು ಬಾರಿಯಾದರೂ ಚೆಂಡು ಹೂ ಬೆಳೆದರೆ ಭೂಮಿಯು ಮತ್ತಷ್ಟು ಫಲವತ್ತತೆ ಹೊಂದುತ್ತದೆ ಎಂಬ ನಂಬಿಕೆ ರೈತರಲ್ಲಿದೆ.