ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ದಶಲಕ್ಷಣ ಪರ್ವವು ಸರ್ವ ಪರ್ವಗಳ ರಾಜನಾಗಿದ್ದು, ಉತ್ತಮ ಕ್ಷಮಾ, ಮಾರ್ದವ, ಆರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಅಕಿಂಚನ್ಯ ಮತ್ತು ಬ್ರಹ್ಮಚರ್ಯ ಎಂಬ ದಶಧರ್ಮಗಳ ಪಾಲನೆಯಿಂದ ಮುನಿಯಾಗುವ ಯೋಗ, ಭಾಗ್ಯ ಪ್ರಾಪ್ತಿಯಾಗುತ್ತದೆ ಎಂದು ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ವೇಣೂರು ಬಾಹುಬಲಿ ಕ್ಷೇತ್ರದ ಯಾತ್ರಿನಿವಾಸದಲ್ಲಿ ಕ್ಷಮಾವಳಿಯೊಂದಿಗೆ ದಶಲಕ್ಷಣ ಪರ್ವದ ಸಮಾರೋಪ ಸಮಾರಂಭದಲ್ಲಿ ಮಂಗಲಪ್ರವಚನ ನೀಡಿದರು.
ಸ್ವಾಮೀಜಿಯವರ ನೇತೃತ್ವದಲ್ಲಿ ಸರ್ವರೂ ಪರಸ್ಪರ ಕ್ಷಮೆ ಯಾಚಿಸಿ ಎಲ್ಲರಿಗೂ ಶುಭ ಹಾರೈಸಿ ಕ್ಷಮಾವಳಿ ಆಚರಿಸಿದರು. ಮೂಡುಬಿದಿರೆ ಜೈನ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ.ಪ್ರಭಾತ್ ಬಲ್ನಾಡ್ ಧಾರ್ಮಿಕ ಉಪನ್ಯಾಸ ನೀಡಿದರು.
ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ ಸ್ವಾಗತಿಸಿದರು. ಅಶ್ವಿನಿ ಪ್ರವೀಣ್ ಕುಮಾರ್ ಇಂದ್ರ ವಂದಿಸಿದರು. ಮಹಾವೀರ ಜೈನ್ ಮೂಡುಕೋಡಿಗುತ್ತು ಕಾರ್ಯಕ್ರಮ ನಿರೂಪಿಸಿದರು. ಡಾ.ವರ್ಷಾ ಮತ್ತು ಸತ್ಯಪ್ರಸಾದ್ ವಿ.ಜೈನ್ ಸಮಾರಂಭದ ಪ್ರಾಯೋಜಕರಾಗಿ ಸಹಕರಿಸಿದರು.
ದಶಧರ್ಮಗಳು ಮನಸ್ಸನ್ನು ಸುಂದರಗೊಳಿಸಿ ವಿವೇಕ ಪ್ರಾಪ್ತಿಗೆ ಪ್ರೇರಕವಾಗಿವೆ. ಅನುಕಂಪ ಮತ್ತು ಕರುಣೆಯೊಂದಿಗೆ ಅಹಿಂಸೆಯ ಪಾಲನೆ ಮಾಡಿದಾಗ ಕ್ಷಮಾ ಗುಣವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಅಜ್ಞಾನ ಮತ್ತು ಮಿಥ್ಯತ್ವವನ್ನು ತ್ಯಜಿಸಿ, ದರ್ಶನಗಳಲ್ಲಿ ಸಮನ್ವಯತೆ ಸಾಧಿಸಿ, ವಿವೇಕದೊಂದಿಗೆ ಸರ್ವಜೀವಿಗಳಲ್ಲಿಯೂ ಅಹಿಂಸೆ ತೋರಿದಾಗ ಮೋಕ್ಷ ಪ್ರಾಪ್ತಿ ಸಾಧ್ಯವಾಗುತ್ತದೆ.
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೂಡುಬಿದಿರೆ ಜೈನಮಠ