ಹನೂರು: ತಾಲೂಕಿನ ಸಿರಗೋಡು ಗ್ರಾಮದ ಶ್ರೀ ಲಕ್ಷ್ಮೀ ವೆಂಕರಮಣ ಸ್ವಾಮಿ ದೇಗುಲದಲ್ಲಿ 3ನೇ ಶ್ರಾವಣ ಶನಿವಾರದ ಅಂಗವಾಗಿ ಶ್ರೀ ಲಕ್ಷ್ಮೀ, ಪದ್ಮಾವತಿ ಹಾಗೂ ಶ್ರೀ ವೆಂಕಟರಮಣ ಸ್ವಾಮಿ ಉಯ್ಯಲೋತ್ಸವ ನೆರವೇರಿಸಲಾಯಿತು.
ದೇಗುಲವನ್ನು ತಳಿರು-ತೋರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ 5 ಗಂಟೆಗೆ ವೆಂಕಟರಮಣ ಸ್ವಾಮಿ ಮೂರ್ತಿಗೆ ವಿವಿಧ ಅಭಿಷೇಕ ನೆರವೇರಿಸಲಾಯಿತು. ವಿವಿಧ ಪುಷ್ಪಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಲಕ್ಷ್ಮೀ, ಪದ್ಮಾವತಿ ಹಾಗೂ ವೆಂಕಟರಮಣ ಸ್ವಾಮಿಯ ಉತ್ಸವ ಮೂರ್ತಿಯನ್ನು ಹೂಗಳಿಂದ ಸಿಂಗರಿಸಿ ಉಯ್ಯಲೆ ಸೇವೆ ನೆರವೇರಿಸಲಾಯಿತು. ಅರ್ಚಕ ರಾಮಕೃಷ್ಣ ಪೂಜಾ ಕೈಂಕರ್ಯ ನೆರವೇರಿಸಿದರು.
ಹನೂರು ಸೇರಿದಂತೆ ಮಂಗಲ, ರಾಮಾಪುರ, ಲೊಕ್ಕನಹಳ್ಳಿ, ಉದ್ದನೂರು, ಬೆಳತ್ತೂರು, ಚಿಕ್ಕಮಾಮಾಪುರ, ಕಂಡಯ್ಯನಪಾಳ್ಯ, ಬಂಡಳ್ಳಿ, ಮಣಗಳ್ಳಿ ಗ್ರಾಮಗಳಿಂದ ಜನರು ಆಗಮಿಸಿದ್ದರು. ದೇಗುಲ ವತಿಯಿಂದ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು.