ಜಿಲ್ಲೆ

ಸ್ವಚ್ಛಗೊಂಡಿತು ವೆಂಕಟರಮಣ ದೇವಳ

Udupi

ಶಂಕರನಾರಾಯಣ: ಸುಮಾರು 800 ವರ್ಷಗಳ ಇತಿಹಾಸವಿರುವ, ಶಿಥಿಲಗೊಂಡ ಶಂಕರನಾರಾಯಣ ಸೌಡ ಹಳೇ ಅಗ್ರಹಾರ ಶ್ರೀ ವೆಂಕಟರಮಣ ದೇವಸ್ಥಾನವನ್ನು ಕರಸೇವೆ ಮೂಲಕ ಹೊರ ಜಗತ್ತಿಗೆ ಪರಿಚಯಿಸುವ ಕಾರ್ಯಕ್ಕೆ ಕುಂದಾಪುರ ಯುವ ಬ್ರಿಗೇಡ್ ಮುಂದಾಗಿದ್ದು ಭಾನುವಾರ ಎಪ್ಪತ್ತಕ್ಕೂ ಅಧಿಕ ಮಂದಿ ದೇವಸ್ಥಾನ ಪ್ರಾಂಗಣದ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡರು.

ಬೆಳಗ್ಗೆ 8 ಗಂಟೆಯಿಂದ ಶ್ರಮದಾನದ ಕೆಲಸ ಆರಂಭವಾಗಿದ್ದು, ವಿಜಯವಾಣಿ ಅಂಕಣಕಾರ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಸೌಡ ಸೇತುವೆ, ಶಂಕರನಾರಾಯಣ ತಾಲೂಕು ರಚನೆ, ದೇವಸ್ಥಾನ ಜೀರ್ಣೋದ್ಧಾರ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಪರಿಹಾರ ಒದಗಿಸುವಂತೆ ತಾಲೂಕು ಹೋರಾಟ ಸಮಿತಿ ಸಂಚಾಲಕ ಚಿಟ್ಟೆ ರಾಜಗೋಪಾಲ ಹಗ್ಡೆಯವರು ಸೂಲಿಬೆಲೆ ಗಮನ ಸೆಳೆದಿದ್ದು, ಸೌಡ ಸೇತುವೆ ನಿರ್ಮಾಣಕ್ಕೆ ಹೆಚ್ಚು ಒತ್ತು ಕೊಡುವ ಜತೆ ಇತರ ಬೇಡಿಕೆ ಬಗ್ಗೆ ಗಮನ ಹರಿಸುವುದಾಗಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಪಾಳುಬಿದ್ದ ಸ್ಥಿತಿಯಲ್ಲಿದ್ದ ವೆಂಕಟರಮಣ ಆಲಯಕ್ಕೆ ಇದೀಗ ಕಳೆ ಬಂದಿದೆ. ಪ್ರಾಂಗಣದಲ್ಲಿದ್ದ ಮುಳ್ಳು, ಗಿಡಗಂಟಿಗಳನ್ನು ಕಡಿಯಲಾಗಿದೆ. ಆವರಣದಲ್ಲಿದ್ದ ಹೆಂಚುಗಳು, ಮರಮಟ್ಟುಗಳನ್ನು ಸುವ್ಯವಸ್ಥಿತಗೊಳಿಲಾಗಿದೆ. ಸ್ವಚ್ಛತಾ ಕಾರ್ಯದಲ್ಲಿ ಬ್ರಿಗೇಡ್ ಕಾರ್ಯಕರ್ತರ ಸಹಿತ ಸ್ಥಳೀಯ ಎಪ್ಪತ್ತಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

ದ.ಕ. ಹಾಲು ಉತ್ಪಾದಕರ ಒಕ್ಕೂಟ ನಿದೇರ್ಶಕ ಹದ್ದೂರು ರಾಜೀವ ಶೆಟ್ಟಿ, ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಸುಬ್ರಹ್ಮಣ್ಯ ಐತಾಳ್ ಬೈಲೂರು, ಸದಸ್ಯರಾದ ವೆಂಕಟೇಶ್ ಭಂಡಾರ‌್ಕರ್, ಕೃಷ್ಣಮೂರ್ತಿ ಬಾಯರಿ, ಶಂಕರನಾರಾಯಣ ತಾಲೂಕು ಹೋರಾಟ ಸಮಿತಿ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ, ವಿಜಯಾ ಯಡಮಕ್ಕಿ, ಶ್ಯಾನುಭಾಗ್, ಸೌಡ ನಾಗರಾಜ ಶೆಟ್ಟಿ, ಯುವ ಬಿಗ್ರೇಡ್ ಕಾರ‌್ಯಕರ್ತರಾದ ನಿರಂಜನ್ ತಲ್ಲೂರು, ಪ್ರದೀಪ್ ಬಸ್ರೂರು, ಪ್ರಮೋದ್ ಶಾನ್ಕಟ್ಟು, ಪ್ರಮೋದ್ ಶಂಕರನಾರಾಯಣ, ವಿಜಯ ಶಂಕರನಾರಾಯಣ ಮುಂತಾದವರು ಸ್ವಚ್ಛತಾ ಕಾರ‌್ಯದಲ್ಲಿ ಪಾಲ್ಗೊಂಡರು.

ಸೌಡ ಹಳೇ ಅಗ್ರಹಾರ ದೇಗುಲ ಪಾಳು ಬಿದ್ದಿರುವ ಬಗ್ಗೆ ಮಾರ್ಚ್ 4 ರ ಸಂಚಿಕೆಯಲ್ಲಿ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ದೇವಾಲಯದಲ್ಲಿ ಬ್ರಿಗೇಡ್ ಬೈಠಕ್...

ದೇವಾಲಯ ಸ್ವಚ್ಛತೆ ಹಾಗೂ ಜೀರ್ಣೋದ್ಧಾರ ಸಂಬಂಧಿಸಿ ಚಕ್ರವರ್ತಿ ಸೂಲಿಬೆಲೆ ಹಾಗೂ ಜೀರ್ಣೋದ್ಧಾರ ಸಮಿತಿ ನೇತೃತ್ವದಲ್ಲಿ ಮತುಕತೆ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ಸೂಲಿಬೆಲೆ, ದೇವಸ್ಥಾನ ಪಾಳು ಬೀಳುವ ಇಂತಹ ಅವ್ಯವಸ್ಥೆಯನ್ನು ಅವಲೋಕನ ಮಾಡಬೇಕಿದೆ. ಸಮಾಜದಲ್ಲಿ ಈ ಬಗ್ಗೆ ಶ್ರದ್ಧೆ ಅಗತ್ಯ. ಕೇಂದ್ರ ಹಾಗೂ ರಾಜ್ಯದಲ್ಲಿ ಸದ್ಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದು ಕಂಡುಬರುತ್ತಿದ್ದು, ಜೀರ್ಣೋದ್ಧಾರಕ್ಕೆ ಸರ್ಕಾರಕ್ಕೆ ದುಂಬಾಲು ಬೀಳುವ ಬದಲು ಸಮಾಜವನ್ನು ಸಂಘಟಿಸಿಕೊಂಡು ಮುನ್ನಡೆಯೋಣ ಎಂದರು.

ಬೆವರು ಸುರಿಸಿದ ಎಸ್‌ಐ, ತಾಪಂ ಸದಸ್ಯ: ಶಂಕರನಾರಾಯಣ ದೇವಳ ಜಾತ್ರೆ ಸಂದರ್ಭ ಠಾಣೆಯಲ್ಲಿ ದೇವತಾ ಕಾರ‌್ಯ, ಕಟ್ಟೆಪೂಜೆ ಸಂದರ್ಭ ಅನ್ನದಾನ ಆಯೋಜಿಸಿ ಜನಸ್ನೇಹಿಯಾಗಿ ಠಾಣೆ ಬದಲಾಯಿಸುವ ಪ್ರಯತ್ನದ ಮೂಲಕ ಸಾರ್ವಜನಿಕರ ಮೆಚ್ಚುಗೆ ಪಡೆದಿರುವ ಶಂಕರನಾರಾಯಣ ಠಾಣೆ ಉಪ ನಿರೀಕ್ಷಕ ಶ್ರೀಧರ ನಾಯ್ಕ, ಯಾರೂ ಕರೆಯದೆ ಸ್ವ ಇಚ್ಛೆಯಿಂದ ಪಾಲ್ಗೊಂಡ ಶ್ರೀಧರ ನಾಯ್ಕ ಒಂದು ಗಂಟೆಗೂ ಅಧಿಕ ಕಾಲ ಶ್ರಮದಾನದಲ್ಲಿ ಪಾಲ್ಗೊಂಡರು. ಪಿಕಾಶಿ ಹಿಡಿದು ಮಣ್ಣು ಅಗೆದು, ಹಾರೆ ಹಿಡಿದು ಮಣ್ಣು ತುಂಬಿ ಬುಟ್ಟಿ ತಲೆಗೆ ಏರಿಸುವ ತನಕ ಸಕ್ರಿಯರಾಗಿದ್ದು, ಕರ ಸೇವಕರ ಮೆಚ್ಚುಗೆಗೆ ಪಾತ್ರವಾಯಿತು. ತಾಪಂ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ಕೂಡ ಹಾರೆ, ಹಿಡಿದು ಕರ ಸೇವಕರೊಟ್ಟಿಗೆ ಸ್ವಚ್ಛತಾ ಕಾರ‌್ಯದಲ್ಲಿ ಪಾಲ್ಗೊಂಡರು.

ಯುವ ಬ್ರಿಗೇಡ್ ಕಳೆದ ಆರು ವರ್ಷಗಳಿಂದ ರಾಜ್ಯಾದ್ಯಂತ ಸ್ವಚ್ಛತಾ ಚಟುವಟಿಕೆಗಳು ಮತ್ತು ಶ್ರದ್ಧಾ ಕೇಂದ್ರಗಳನ್ನು ಉಳಿಸುವ ಪ್ರಯತ್ನ ಮಾಡುತ್ತಿದೆ. ಇತಿಹಾಸ ಪ್ರಸಿದ್ಧ ವೆಂಕಟರಮಣ ದೇವಸ್ಥಾನ ಶಿಥಿಲಾವಸ್ಥೆಯಲ್ಲಿರುವುದು ಶೋಭೆಯಲ್ಲ. ಹೊಸ ದೇವಾಲಯಗಳನ್ನು ಭರ್ಜರಿಯಾಗಿ ಕಟ್ಟುವ ಆಸ್ತಿಕರು ಈ ದೇವಸ್ಥಾನ ಉಳಿಸಿ ಬೆಳೆಸುವ ಕಾರ್ಯಕ್ಕೂ ಕೈ ಹಾಕಬೇಕಿದೆ. ಮುಂದಿನ ದಿನದಲ್ಲಿ ಈ ದೇವಸ್ಥಾನ ಸುಂದರ ರೂಪ ಪಡೆಯುವ ವಿಶ್ವಾಸವಿದ್ದು, ಈ ಬಗ್ಗೆ ಕಾರ್ಯ ಪ್ರವೃತ್ತರಾಗುವುದು ನಮ್ಮೆಲ್ಲರ ಹೊಣೆಯಾಗಿದೆ. ಚಕ್ರವರ್ತಿ ಸೂಲಿಬೆಲೆ ಯುವ ಬಿಗ್ರೇಡ್ ಸಂಸ್ಥಾಪಕ