ಗೌರಿಬಿದನೂರು: ತಾಲೂಕಿನ ಡಿ.ಪಾಳ್ಯ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವದ ಅಂಗವಾಗಿ ಕಳೆದ ಹತ್ತು ದಿನಗಳಿಂದ ದೇವಾಲಯದಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಭಾನುವಾರ ಕಲ್ಯಾಣೋತ್ಸವ, ಸೋಮವಾರ ಮಧ್ಯಾಹ್ನ ಶುಭ ಅಭಿಜಿತ್ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಇಷ್ಟಾರ್ಥಗಳನ್ನು ನೆರವೇರಿಸುವಂತೆ ಬಾಳೆ ಹಣ್ಣನ್ನು ತೇರಿಗೆ ಅರ್ಪಿಸಿ ಪ್ರಾರ್ಥಿಸಿದರು. ದೇವಾಲಯದ ಆಡಳಿತ ಮಂಡಳಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಶಾಸಕ ಕೆ ಎಚ್ ಪುಟ್ಟಸ್ವಾಮಿಗೌಡ, ಜನಪ್ರತಿನಿಧಿಗಳು, ಮುಖಂಡರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು.