ಜಿಲ್ಲೆ

ವೆಂಕಟಪ್ಪ ಕಲಾ ಗ್ಯಾಲರಿಗೆ ಹೈಟೆಕ್ ಸ್ಪರ್ಶ: ಉದ್ಘಾಟನೆಗೆ ಕಲಾವಿದರಿಗೇ ಇಲ್ಲ ಆಹ್ವಾನ

ಪಂಕಜ ಕೆ.ಎಂ.

ಬೆಂಗಳೂರು: ನಿರ್ವಹಣೆ ಕೊರತೆಯಿಂದಾಗಿ ಹದಗೆಟ್ಟಿದ್ದ ರಾಜ್ಯ ಸರ್ಕಾರದ ಒಡೆತನದಲ್ಲಿರುವ ‘ವೆಂಕಟಪ್ಪ ಕಲಾ ಗ್ಯಾಲರಿ’ ನವೀಕರಣ ಕಾರ್ಯ ಪೂರ್ಣಗೊಂಡಿದ್ದು, ಹೊಸ ರೂಪದೊಂದಿಗೆ ಸಾರ್ವಜನಿಕರಿಗೆ ತೆರೆದುಕೊಳ್ಳುತ್ತಿರುವ ಗ್ಯಾಲರಿಯ ಉದ್ಘಾಟನಾ ಕಾರ್ಯಕ್ರಮದಿಂದ ಕಲಾವಿದರನ್ನೇ ದರ ಇಡಲಾಗಿದೆ.

ಜೂ. 12ರಂದು ಸಂಜೆ 4 ಗಂಟೆಗೆ ನವೀಕೃತ ಗ್ಯಾಲರಿಯ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ಸಚಿವ ಎಚ್.ಕೆ. ಪಾಟೀಲ ಅವರು ಗ್ಯಾಲರಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಬ್ರಿಗೇಡ್ ಸಮೂಹ ಸಂಸ್ಥೆಯ ಕಾರ್ಯಾಧ್ಯಕ್ಷ ಎಂ.ಆರ್. ಜೈಶಂಕರ್, ಶಾಸಕ ರಿಜ್ವಾನ್ ಅರ್ಷದ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉಳಿದಂತೆ ಸಂಸದರು, ಸಚಿವರು, ಶಾಸಕರು, ಸರ್ಕಾರದ ಮುಖ್ಯಕಾರ್ಯದರ್ಶಿ ಹಾಗೂ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಅಧಿಕಾರಿಗಳು ಮಾತ್ರವೇ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಕೇವಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಹೆಸರಷ್ಟೇ ಇದ್ದು, ಕಲೆಯನ್ನು ಪ್ರೋತ್ಸಾಹಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಅಧಿಕಾರಿಗಳು ಸೇರಿ ಯಾವುದೇ ಕಲಾವಿದರಿಗೆ ಆಹ್ವಾನ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಅಲ್ಲದೆ ಕಲಾಗ್ಯಾಲರಿಯ ಉದ್ಘಾಟನೆಗೆ ಕಲಾವಿದರನ್ನೇ ಆಹ್ವಾನಿಸದಿರುವುದು ಎಂತಹ ನಿರ್ಧಾರ ಎಂದು ಪ್ರಶ್ನೆ ಮಾಡಿದ್ದಾರೆ. ಪುರಾತತ್ವ ಇಲಾಖೆಯ ಈ ನಡೆಗೆ ಕಲಾವಿದರು ಬೇಸರ ವ್ಯಕ್ತಪಡಿಸಿದ್ದಾರೆ.

3 ಅಂತಸ್ತಿನ ಗ್ಯಾಲರಿ:

ಬ್ರಿಗೇಡ್ ಫೌಂಡೇಷನ್‌ನಿಂದ ಕಾರ್ಪೋರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಅಡಿಯಲ್ಲಿ 3 ಅಂತಸ್ತಿನ ಗ್ಯಾಲರಿಯಯನ್ನು 6 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗಿದೆ. 2024ರ ಫೆಬ್ರವರಿಯಲ್ಲಿ ಆರಂಭಗೊಂಡ ನವೀಕರಣ ಕಾರ್ಯ, ಕಳೆದ ಅಕ್ಟೋಬರ್‌ನಲ್ಲೇ ಪೂರ್ಣಗೊಳ್ಳಬೇಕಿತ್ತು. ನಾನಾ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದ್ದು, ಅಂದಾಜು ವೆಚ್ಚವೂ ಹೆಚ್ಚಾಯಿತು. ಜನವರಿ ಅಂತ್ಯಕ್ಕೆ ಲೋಕಾರ್ಪಣೆಯಾಗಬೇಕಿದ್ದ ಗ್ಯಾಲರಿ ತಡವಾಗಿ ಉದ್ಘಾಟನೆಗೊಳ್ಳುತ್ತಿದೆ. ಆದರೆ ಕಲಾವಿದರನ್ನೇ ದೂರ ಇಟ್ಟು ಈ ಕಾರ್ಯಕ್ರಮ ನಡೆಸಲಾಗುತ್ತಿದೆ.

ವೈಶಿಷ್ಟ್ಯಗಳೇನು?:

‘ವೆಂಕಟಪ್ಪ ಕಲಾ ಗ್ಯಾಲರಿ’ ನವೀಕರಣದ ಭಾಗವಾಗಿ ಇಲ್ಲಿನ ಗ್ಯಾಲರಿಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಜತೆಗೆ ಗ್ಯಾಲರಿಯ ವಿಸ್ತೀರ್ಣವನ್ನು ಹೆಚ್ಚಿಸಲಾಗಿದೆ. ಇವುಗಳಲ್ಲಿ ವೆಂಕಟಪ್ಪ, ಕೆ.ಕೆ. ಹೆಬ್ಬಾರ್ ಮತ್ತು ರಾಜಾರಾಂ ಅವರ ಚಿತ್ರಗಳ ಪ್ರದರ್ಶನಕ್ಕೆ ಶಾಶ್ವತ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ಯಾಲರಿಯ ಛಾವಣಿ, ಗೋಡೆಗಳನ್ನು ಹೊಸ ವಿನ್ಯಾಸದ ಸ್ಪರ್ಶ ನೀಡಲಾಗಿದೆ. ಹೊರಭಾಗದಲ್ಲಿ ಶಿಲ್ಪಕಲಾ ಉದ್ಯಾನ ಬರಲಿದೆ. ಪ್ರದರ್ಶನ ಆಯೋಜನೆಗೆ ಬರುವ ಕಲಾವಿದರಿಗೆ ತಮ್ಮ ಕಲಾಕೃತಿಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಸೇರಿ ಇನ್ನಿತರ ಸೌಲಭ್ಯ ಕಲ್ಪಿಸಲಾಗಿದೆ.

ಬೆಳಕಿನ ವ್ಯವಸ್ಥೆ:

ಕಲಾಕೃತಿ ಪ್ರದರ್ಶನಕ್ಕೆ ಅತ್ಯುತ್ತಮ ಬೆಳಕಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ತಜ್ಞರ ಸಲಹೆ ಪಡೆದು ಆಧುನಿಕ ಲೈಟಿಂಗ್ ಅಳವಡಿಕೆಗೆ ಕ್ರಮ ವಹಿಸಲಾಗಿದೆ. ಎ.ಸಿ. ಒಳಗೊಂಡಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಗ್ಯಾಲರಿಯ ಹಿಂಭಾಗದಲ್ಲಿ ಕಲೆಗೆ ಸಂಬಂಧಿಸಿದ ಗೋಷ್ಠಿ, ಚರ್ಚೆಗಳಿಗೆ ಅವಕಾಶ ಕಲ್ಪಿಸಲು ತೆರೆದ ಸಭಾಂಗಣ ಹಾಗೂ ಕ್ಯಾಫಿಟೇರಿಯಾ ಇರಲಿದೆ. ಸಮ್ಮೇಳನ ಸಭಾಂಗಣವನ್ನೂ ನವೀಕರಣ ಮಾಡಲಾಗಿದೆ.

ಕೋಟ್:

ಬ್ರಿಗೇಡ್ ಫೌಂಡೇಷನ್ ವತಿಯಿಂದ ನವೀಕರಣಗೊಂಡು ಅವರಿಂದ ಗ್ಯಾಲರಿ ಹಸ್ತಾಂತರ ಮಾಡುವ ಸರಳ ಕಾರ್ಯಕ್ರಮ ಇದಾಗಿದೆ. ಕಲಾವಿದರಿಗಾಗಿಯೇ ನವೀಕರಣಗೊಂಡಿರುವ ಗ್ಯಾಲರಿ. ಹಾಗಾಗಿ ಕಲಾವಿದರನ್ನು ದೂರ ಇಡುವ ಪ್ರಶ್ನೆಯೇ ಬರುವುದಿಲ್ಲ. ಕಾರ್ಯಕ್ರಮಕ್ಕೆ ಕಲಾವಿದರನ್ನೂ ಆಹ್ವಾನಿಸಲಾಗಿದೆ.

-ಎ. ದೇವರಾಜು, ರಾಜ್ಯ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ